ಮೇ 14ರಿಂದ ಭಾರತಕ್ಕೆ ಮುಂಗಾರು ಪ್ರವೇಶ: ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸಾಧ್ಯತೆ
ನವದೆಹಲಿ: ದೇಶಾದ್ಯಂತ ತೀವ್ರ ಉಷ್ಣತೆಯಿಂದ ಬಳಲುತ್ತಿರುವ ಜನತೆಗೆ ಶೀಘ್ರದಲ್ಲೇ ನೆಮ್ಮದಿ ಸಿಗುವ ಸಾಧ್ಯತೆ ಇದ್ದು, ಮೇ 14ರಿಂದ 16ರ ನಡುವೆ ನೈಋತ್ಯ ಮುಂಗಾರು ಭಾರತ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮೇ ತಿಂಗಳಲ್ಲಿ ದೇಶದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನೈಋತ್ಯ ಮುಂಗಾರು ಆಗಮನವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ ಹಿಮಾಲಯ ತಪ್ಪಲಿನ ಕೆಲವು ಪ್ರದೇಶಗಳು, ಪೂರ್ವ ಕರಾವಳಿ ರಾಜ್ಯಗಳು, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಈ ತಿಂಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಮತ್ತು ಬಿಸಿಗಾಳಿ ದಿನಗಳು ಮುಂದುವರಿಯುವ ಸಾಧ್ಯತೆ ಇದೆ.
ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸರಾಸರಿ ಮಳೆಯ ಪ್ರಮಾಣ ಹೆಚ್ಚಿರಲಿದೆ. ಆದರೆ ಪೂರ್ವ, ಈಶಾನ್ಯ ಹಾಗೂ ಪೂರ್ವ-ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ. ಇದೇ ವೇಳೆ ವಾಯುವ್ಯ ಭಾರತದ ಹಲವೆಡೆ, ಮಧ್ಯ ಭಾರತದ ಕೆಲವು ಭಾಗಗಳು, ದಕ್ಷಿಣ ಭಾರತದ ಕರಾವಳಿ ಸನಿಹದ ಪ್ರದೇಶಗಳು ಹಾಗೂ ಈಶಾನ್ಯ ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಮುಂಗಾರು ಆರಂಭದ ಕುರಿತು ಮಾತನಾಡಿದ ಅವರು, ಮೇ 14ರಿಂದ 16ರೊಳಗೆ ನೈಋತ್ಯ ಮುಂಗಾರು ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ, ಸಮಭಾಜಕ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಎಲ್ ನಿನೋ ದಕ್ಷಿಣ ಆಂದೋಲನದ ತಟಸ್ಥ ಸ್ಥಿತಿ ಕ್ರಮೇಣ ಎಲ್ ನಿನೋ ಪರಿಸ್ಥಿತಿಯತ್ತ ಸಾಗುತ್ತಿದೆ ಎಂದು ಐಎಂಡಿ ತಿಳಿಸಿದೆ. ಇದು ಮಧ್ಯ ಪೆಸಿಫಿಕ್ ಸಾಗರದ ನೀರಿನ ತಾಪಮಾನ ಏರಿಕೆಯನ್ನು ಸೂಚಿಸುತ್ತಿದ್ದು, ಹವಾಮಾನ ಮಾದರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.



