ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ‘ಕೆಡಿ’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಇಡೀ ದೇಶವನ್ನೇ ಕೆರಳಿಸಿದ್ದು ಎಲ್ಲರಿಗೆ ಗೊತ್ತೇ ಇದೆ. ಹಾಡಿನ ಸಾಹಿತ್ಯ ಮತ್ತು ಮೇಕಿಂಗ್ ನೋಡಿ ಕೇವಲ ಕನ್ನಡಿಗರು ಮಾತ್ರವಲ್ಲ, ಇಡೀ ಭಾರತವೇ ನಿಗಿ ನಿಗಿ ಕೆಂಡ ಕಾರಿತ್ತು. ವಿವಾದ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಕೊನೆಗೆ ರಾಷ್ಟ್ರೀಯ ಮಹಿಳಾ ಆಯೋಗವೇ ಅಖಾಡಕ್ಕಿಳಿಯಬೇಕಾಯಿತು.
ಈ ಹಾಡಿನ ವಿವಾದದ ಕಿಚ್ಚು ಹತ್ತಿಕೊಂಡಾಗ ನಿರ್ದೇಶಕ ಪ್ರೇಮ್ ಮೇಲೆ ಎಲ್ಲರೂ ಮುಗಿಬಿದ್ದಿದ್ದರು. ಚಿತ್ರದ ನಟಿ ನೋರಾ ಫತೇಹಿ ಕೂಡ ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ದೂರ ಸರಿದಿದ್ದರು.
ನನಗೆ ಕನ್ನಡ ಗೊತ್ತಿಲ್ಲದ ಕಾರಣ ಪ್ರೇಮ್ ಹೇಳಿದ್ದನ್ನೇ ನಾನು ನಂಬಿದ್ದೆ, ಹಿಂದಿ ಸಾಹಿತ್ಯ ಕೇಳಿದ ಮೇಲೆಯೇ ನನಗೆ ಇದರ ಗಂಭೀರತೆ ಅರ್ಥವಾಗಿದ್ದು ಎಂದು ಹೇಳುವ ಮೂಲಕ ಪರಿಸ್ಥಿತಿಯ ಕೈಗೊಂಬೆಯಾಗಿದ್ದೆ ಎಂದು ನೋರಾ ವಾದಿಸಿದ್ದರು.
ಇದೇ ವಿವಾದದ ಹಿನ್ನೆಲೆಯಲ್ಲಿ ಹಾಡನ್ನು ಯೂಟ್ಯೂಬ್‌ನಿಂದಲೇ ಕಿತ್ತೆಸೆಯಲಾಗಿತ್ತು.ಇಷ್ಟೇ ಅಲ್ಲ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಈ ಹಾಡಿನ ನಿಷೇಧದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು.
ಇಷ್ಟು ದಿನ ವಿಚಾರಣೆಯಿಂದ ದೂರವಿದ್ದ ನೋರಾ ಫತೇಹಿ, ಕೊನೆಗೂ ಇಂದು (ಮೇ 7) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದು ಹೇಳಿರುವ ನೋರಾ, ಒಬ್ಬ ಜವಾಬ್ದಾರಿಯುತ ಕಲಾವಿದೆಯಾಗಿ ನಾನು ಎಚ್ಚರಿಕೆಯಿಂದ ಇರಬೇಕಿತ್ತು ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ.
ಆಯೋಗದ ಮುಂದೆ ಲಿಖಿತ ರೂಪದಲ್ಲಿ ಕ್ಷಮಾಪಣಾ ಪತ್ರ ಸಲ್ಲಿಸಿರುವ ನೋರಾ, ಕೆಡಿಯಲ್ಲಿ ಹೆಜ್ಜೆ ಹಾಕಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಾದಂತೆ ಇದೆ. ಯಾಕೆಂದರೆ
ಕೇವಲ ಕ್ಷಮೆ ಕೇಳಿ ಕೈತೊಳೆದುಕೊಳ್ಳದ ನೋರಾ, ಒಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಸಮಾಜಕ್ಕೆ ನಾವು ಏನನ್ನಾದರೂ ಮರಳಿ ನೀಡಬೇಕು, ಅದು ನಮಗೆ ಮುಖ್ಯ ಎನ್ನುವ ಮೂಲಕ ನೋರಾ ತಮ್ಮ ಈ ನಿರ್ಧಾರದಿಂದ ಸಾರ್ವಜನಿಕರ ಆಕ್ರೋಶವನ್ನು ತುಸು ತಣ್ಣಗೆ ಮಾಡಲು ಪ್ರಯತ್ನಿಸಿದ್ದಾರೆ.
ಹಾಗೇ ನೋಡಿದರೆ, ನೋರಾ ಫತೇಹಿ ಅವರಿಗಿಂತ ಮೊದಲು ಇದೇ ಪ್ರಕರಣದಲ್ಲಿ ನಟ ಸಂಜಯ್ ದತ್ ಕೂಡ ಆಯೋಗದ ಮುಂದೆ ಹಾಜರಾಗಿದ್ದರು. ಸಂಜಯ್ ದತ್ ಅವರು ನಾಗ್ಪುರದ ಬುಡಕಟ್ಟು ಸಮುದಾಯದ 50 ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಹೇಳಿದ್ದರು. ಈಗ ನೋರಾ ಕೂಡ ಸಂಜಯ್ ದತ್ ಅವರ ಹಾದಿಯನ್ನೇ ಹಿಡಿದಿದ್ದಾರೆ.
ಕಲಾವಿದರು ತಮಗೆ ಅರಿವಿಲ್ಲದೆ ಅಥವಾ ಅನಿವಾರ್ಯವಾಗಿ ತಪ್ಪು ಮಾಡಿದರೂ, ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ಮೂಲಕ ಅದನ್ನು ಸರಿಪಡಿಸಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ.
ಈ ‘ಸರ್ಸೆ ಸೆರಗು’ ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಮಾರ್ಚ್ ತಿಂಗಳಲ್ಲಿ ರಿಲೀಸ್ ಆದಾಗ ಉತ್ತರ ಭಾರತದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಸಾಹಿತ್ಯ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಮಹಿಳಾ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಈ ಎಲ್ಲಾ ವಿವಾದಗಳ ನಂತರ ನಿರ್ದೇಶಕ ಪ್ರೇಮ್ ಈಗಾಗಲೇ ಕ್ಷಮೆ ಕೇಳಿದ್ದರು. ಈಗ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ, ಆದರೆ ಚಿತ್ರದಿಂದ ಆ ವಿವಾದಾತ್ಮಕ ಹಾಡನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.
ಒಟ್ಟಿನಲ್ಲಿ, ಗ್ಲ್ಯಾಮರ್ ಹೆಸರಿನಲ್ಲಿ ಅತಿಯಾದ ಸಾಹಸಕ್ಕೆ ಕೈಹಾಕಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಚಿತ್ರರಂಗದ ಘಟಾನುಘಟಿಗಳು ಮಹಿಳಾ ಆಯೋಗದ ಮೆಟ್ಟಿಲೇರಿ ಕ್ಷಮೆ ಕೇಳುವಂತಾಯಿತು. ನೋರಾ ಫತೇಹಿ ಅವರ ಈ ಪಶ್ಚಾತ್ತಾಪ ಮತ್ತು ಅನಾಥ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿರ್ಧಾರವು ಅವರ ಮೇಲಿದ್ದ ಕಪ್ಪು ಚುಕ್ಕೆಯನ್ನು ಸ್ವಲ್ಪ ಮಟ್ಟಿಗೆ ಅಳಿಸಿ ಹಾಕಬಹುದು. ಸದ್ಯಕ್ಕಂತೂ ನೋರಾ ಕ್ಷಮೆಯಾಚನೆಯೊಂದಿಗೆ ಈ ವಿವಾದ ಅಂತ್ಯವಾದಂತಾಗಿದೆ.



