ಮೈದಾನದಲ್ಲಿ ಗೂಗ್ಲಿ ಎಸೆದು ಬ್ಯಾಟರ್‌ಗಳ ಬುಡ ಅಲುಗಾಡಿಸುವ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್, ಈಗ ವಿಮಾನದೊಳಗೆ ‘ಹೊಗೆ’ ಎಬ್ಬಿಸಿ ದೊಡ್ಡ ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇದಿ ಬಿಸಿಸಿಐನಿಂದ ದಂಡ ಹಾಕಿಸಿಕೊಂಡ ಬೆನ್ನಲ್ಲೇ, ಈಗ ಚಹಾಲ್ ಸರದಿ ಬಂದಿದೆ. ಪಂಜಾಬ್ ಕಿಂಗ್ಸ್ ತಂಡದ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಚಹಾಲ್ ಇ-ಸಿಗರೇಟ್ ಸೇದುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಜಂಗೀ ಕುಸ್ತಿಗೆ ನಾಂದಿ ಹಾಡಿದೆ.
ಹೌದು, ಅಸಲಿಗೆ ಯಾವುದೇ ವಿಮಾನದೊಳಗೆ ಧೂಮಪಾನ ಮಾಡುವುದು ಇರಲಿ, ಕನಿಷ್ಠ ಇ-ಸಿಗರೇಟ್ ಹಿಡಿಯುವುದು ಕೂಡ ಕಾನೂನುಬಾಹಿರ ಮತ್ತು ಅಪಾಯಕಾರಿ. ಆದರೆ ಇಡೀ ವಿಮಾನದ ಸುರಕ್ಷತೆಯನ್ನೇ ಪಣಕ್ಕಿಟ್ಟು ಚಹಾಲ್ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಚಹಾಲ್ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಕೈಗಳಿಂದ ಮುಚ್ಚಿಕೊಂಡು ಇ-ಸಿಗರೇಟ್ ಸೇದುತ್ತಿರುವುದು ಸ್ಪಷ್ಟವಾಗಿ ಕಂಡಿದೆ. ಚಹಾಲ್ ಅವರ ಈ ಸಾಧನೆಯಿಂದಾಗಿ ಈಗ ಅವರ ಕ್ರಿಕೆಟ್ ಕೆರಿಯರ್ ಮುಳುಗುವ ಸಾಧ್ಯತೆ ಇದೆ.
ತಮಾಷೆಯೆಂದರೆ, ಪಂಜಾಬ್ ಕಿಂಗ್ಸ್ ತಂಡವೇ ಈ ವಿಡಿಯೋವನ್ನು ಮೊದಲು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು. ಅಚಾತುರ್ಯ ಅರಿವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದರೂ, ಅಷ್ಟರಲ್ಲಾಗಲೇ ಚುರುಕಾಗಿದ್ದ ನೆಟ್ಟಿಗರು ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಬೆಂಕಿ ಇಲ್ಲದಿದ್ದರೂ ಹೊಗೆಯಾಡುವ ಈ ಇ-ಸಿಗರೇಟ್‌ಗಳು ವಿಮಾನದ ಸೆನ್ಸಾರ್‌ಗಳನ್ನು ಆನ್ ಮಾಡಬಲ್ಲವು. ಇಷ್ಟೇ ಅಲ್ಲ ಬೆಂಕಿಯ ಅನಾಹುತಕ್ಕೂ ದಾರಿ ಮಾಡಿಕೊಡಬಹುದು. ಈ ಕನಿಷ್ಠ ಜ್ಞಾನ ಚಹಾಲ್‌ಗೆ ಇಲ್ಲವೇ ಎಂಬ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.
ಈ ಹಿಂದೆ ರಿಯಾನ್ ಪರಾಗ್ ಇದೇ ತಪ್ಪು ಮಾಡಿದಾಗ ಬಿಸಿಸಿಐ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಿತ್ತು. ಆದರೆ ಚಹಾಲ್ ಮಾಡಿರೋದು ಅದಕ್ಕಿಂತ ದೊಡ್ಡ ತಪ್ಪು. ಯಾಕೆಂದರೆ ಇದು ಡ್ರೆಸ್ಸಿಂಗ್ ರೂಮ್ ಅಲ್ಲ, ನೂರಾರು ಪ್ರಯಾಣಿಕರಿರೋ ವಿಮಾನ. ಒಂದು ವೇಳೆ ಏರ್‌ಲೈನ್ಸ್ ಅಥವಾ ನಾಗರಿಕ ವಿಮಾನಯಾನ ಸಂಸ್ಥೆ ಈ ಬಗ್ಗೆ ದೂರು ನೀಡಿದರೆ, ಚಹಾಲ್ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಬಹುದು ಅಥವಾ ಅವರ ವಿಮಾನ ಪ್ರಯಾಣದ ಮೇಲೆ ನಿಷೇಧ ಹೇರುವ ಸಾಧ್ಯತೆಯೂ ಇದೆ.
ಚಹಾಲ್ ಇಂತಹ ವಿವಾದಗಳಿಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಐಪಿಎಲ್ ಆರಂಭಕ್ಕೂ ಮುನ್ನ ತಮ್ಮ ಬಿಎಂಡಬ್ಲ್ಯು ಕಾರು ಚಲಾಯಿಸುವಾಗ ಅರ್ಧ ಸೇದಿದ್ದ ಸಿಗರೇಟನ್ನು ಕಿಟಕಿಯಿಂದ ಹೊರಗೆ ಎಸೆದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು ಚಹಾಲ್. ಹೀಗಾಗಿ ಹೆಸರಾಂತ ಆಟಗಾರರಾಗಿ ಯುವಕರಿಗೆ ಮಾದರಿಯಾಗಬೇಕಾದವರೇ ಈ ರೀತಿ ರಸ್ತೆ ಮತ್ತು ವಿಮಾನದಲ್ಲಿ ಹರಟೆ ಹೊಡೆಯುತ್ತಾ ‘ಹೊಗೆ’ ಬಿಡುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಸದ್ಯ ಹಲವರು ಸಾಮಾಜಿಕ ಜಾಲತಾಣದ ಮೂಲಕ ಕೇಳುತ್ತಿದ್ದಾರೆ.
ಇನ್ನು ಕ್ರಿಕೆಟ್ ಅಂದಮೇಲೆ ಕೇವಲ ಬ್ಯಾಟಿಂಗ್-ಬೌಲಿಂಗ್ ಅಷ್ಟೇ ಅಲ್ಲ, ಫಿಟ್ನೆಸ್ ಮತ್ತು ಶಿಸ್ತು ಕೂಡ ಅಷ್ಟೇ ಮುಖ್ಯ. ವಿಮಾನದಂತಹ ಸೂಕ್ಷ್ಮ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ ಚಹಾಲ್, ತಾವು ಶಿಸ್ತಿನ ಆಟಗಾರನಲ್ಲ ಎಂಬುದನ್ನು ತಾವೇ ಸಾಬೀತುಪಡಿಸಿದ್ದಾರೆ. ಐಪಿಎಲ್ ಹವಾ ಜೋರಾಗಿರುವಾಗ ಇಂತಹ ಘಟನೆಗಳು ಟೂರ್ನಿಯ ಘನತೆಗೆ ಧಕ್ಕೆ ತರುತ್ತವೆ. ಬಿಸಿಸಿಐ ಈಗ ಚಹಾಲ್‌ಗೆ ಎಷ್ಟು ದಂಡ ಹಾಕುತ್ತೆ ಅಥವಾ ಯಾವ ಕಠಿಣ ಕ್ರಮ ಕೈಗೊಳ್ಳುತ್ತೆ ಅನ್ನೋದೇ ಈಗಿನ ಕುತೂಹಲ.
ಒಟ್ಟಿನಲ್ಲಿ, ಮೈದಾನದ ಹೊರಗಿನ ಚಹಾಲ್ ಅವರ ಈ ‘ಧೂಮಪಾನ’ದ ಆಟ ಈಗ ಬಿಸಿಸಿಐ ಕೋರ್ಟ್‌ಗೆ ತಲುಪಿದೆ. ಆಟಗಾರರಿಗೆ ಸಿಕ್ಕಾಪಟ್ಟೆ ಹಣ, ಪ್ರಚಾರ ಸಿಕ್ಕಾಗ ಅವರಲ್ಲಿ ಜವಾಬ್ದಾರಿ ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಸಣ್ಣ ತಪ್ಪು ಮಾಡಿದರೂ ಅದು ದೊಡ್ಡದಾಗಿ ಕಾಣುತ್ತದೆ. ಅದರಲ್ಲೂ ವಿಮಾನದ ಸುರಕ್ಷತೆಯ ವಿಷಯದಲ್ಲಿ ಚಹಾಲ್ ಚೆಲ್ಲಾಟವಾಡಿದ್ದಾರೆ. ಈ ಪ್ರಕರಣ ಮುಂದೆ ಎಲ್ಲಿ ಹೋಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.



