ವಾಟ್ಸಾಪ್‌ನಲ್ಲಿ ಯಾರೋ ಅಪರಿಚಿತರು ಕಳುಹಿಸಿದ ಒಂದು ‘ವೆಡ್ಡಿಂಗ್ ಕಾರ್ಡ್’ ಮೆಸೇಜ್ ನೋಡಿ ಖುಷಿ ಪಡಬೇಡಿ. ಯಾಕಂದ್ರೆ, ನಿಮ್ಮ ಆ ಒಂದು ಕುತೂಹಲದ ಕ್ಲಿಕ್ ನಿಮ್ಮ ಇಡೀ ಜೀವನದ ಗಳಿಕೆಯನ್ನೇ ಕ್ಷಣಾರ್ಧದಲ್ಲಿ ಬೂದಿ ಮಾಡಬಹುದು. ಬೆಂಗಳೂರಿನ ಉದ್ಯಮಿಯೊಬ್ಬರು ಮದುವೆ ಆಮಂತ್ರಣ ಪತ್ರ ಅಂದುಕೊಂಡು ಒಂದು ಫೈಲ್ ಡೌನ್‌ಲೋಡ್ ಮಾಡಿ ಬರೋಬ್ಬರಿ 5 ಲಕ್ಷ ರೂಪಾಯಿ ಕಳೆದುಕೊಂಡಿರೋ ಆಘಾತಕಾರಿ ಘಟನೆ ಈಗ ಬೆಳಕಿಗೆ ಬಂದಿದೆ. ಇದು ಕೇವಲ ವಂಚನೆಯಲ್ಲ, ಡಿಜಿಟಲ್ ಲೋಕದಲ್ಲಿ ನಡೆಯುತ್ತಿರುವ ಹಗಲು ದರೋಡೆ.
ನಗರದ 42 ವರ್ಷದ ಉದ್ಯಮಿ ನೂರ್ ನಹೀದ್ ಖಾನ್ ಅವರ ವಾಟ್ಸಾಪ್‌ಗೆ ಒಂದು ಮೆಸೇಜ್ ಬಂದಿತ್ತು. ನಮ್ಮ ಮದುವೆಗೆ ನಿಮ್ಮನ್ನು ಆಹ್ವಾನಿಸಲು ನಮಗೆ ಸಂತೋಷವಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ಕಾರ್ಡ್ ಡೌನ್‌ಲೋಡ್ ಮಾಡಿ ಎಂಬ ಅತ್ಯಂತ ವಿನಯಪೂರ್ವಕ ಬರಹದ ಜೊತೆಗೆ ಹೂವಿನ ಎಮೋಜಿಗಳಿದ್ದವು. ಯಾರದೋ ಮದುವೆ ಇರಬಹುದು ಎಂದು ನಂಬಿದ ಖಾನ್, ಆ ಮೆಸೇಜ್ ಕೆಳಗಿದ್ದ ಫೈಲ್ ಕ್ಲಿಕ್ ಮಾಡಿದ್ದಾರೆ. ಅಷ್ಟೇ, ಅವರ ಬಾಳಿನ ”ಮಂಗಳ ವಾದ್ಯ” ಅಲ್ಲಿಂದಲೇ ಶುರುವಾಯ್ತು.
ಖಾನ್ ಅವರು ಆ ಫೈಲ್ ಓಪನ್ ಮಾಡಿದ ಕೇವಲ 9 ನಿಮಿಷಗಳಲ್ಲಿ (ಮುಂಜಾನೆ 4:45 ರಿಂದ 4:54ರ ಒಳಗೆ) ಅವರ ಬ್ಯಾಂಕ್ ಖಾತೆಯಿಂದ 5,00,440 ರೂಪಾಯಿ ಹಣ ಮಾಯವಾಗಿತ್ತು! ಆಶ್ಚರ್ಯದ ಸಂಗತಿಯೆಂದರೆ, ಹಣ ಹೋಗುವಾಗ ಅವರಿಗೆ ಯಾವುದೇ ಓಟಿಪಿ (OTP) ಬಂದಿಲ್ಲ. ಅಷ್ಟರಲ್ಲಾಗಲೇ ಸೈಬರ್ ಖದೀಮರು ಉದ್ಯಮಿಯ ಮೊಬೈಲ್ ಅನ್ನು ಸಂಪೂರ್ಣವಾಗಿ ತಮ್ಮ ಕಪಿಮುಷ್ಠಿಗೆ ತಗೊಂಡಿದ್ದರು.
ಪೊಲೀಸರ ತನಿಖೆಯ ಪ್ರಕಾರ, ವಂಚಕರು ಕಳುಹಿಸಿದ್ದು ಮದುವೆ ಕಾರ್ಡ್ ಅಲ್ಲ, ಬದಲಿಗೆ ಅದೊಂದು ‘APK’ ಹೆಸರಿನ ಮಾಲ್ವೇರ್ ಫೈಲ್. ಈ APK ಫೈಲ್ ಅಂದ್ರೆ ಒಂದು ರೀತಿಯ ಸಾಫ್ಟ್‌ವೇರ್ ಅಪ್ಲಿಕೇಶನ್ ಇದ್ದಂತೆ. ನೀವು ಇದನ್ನು ಒಮ್ಮೆ ಇನ್‌ಸ್ಟಾಲ್ ಮಾಡಿದರೆ ಸಾಕು, ನಿಮ್ಮ ಫೋನ್‌ನಲ್ಲಿರುವ ಗೂಗಲ್ ಪೇ, ಫೋನ್ ಪೇ, ಬ್ಯಾಂಕಿಂಗ್ ಆ್ಯಪ್‌ಗಳು ಮಾತ್ರವಲ್ಲದೆ ನಿಮ್ಮ ಗ್ಯಾಲರಿ ಮತ್ತು ಕ್ಯಾಮೆರಾವನ್ನೂ ವಂಚಕರು ರಿಮೋಟ್ ಮೂಲಕ ಆಪರೇಟ್ ಮಾಡಬಲ್ಲರು. ಅಂದರೆ, ನಿಮ್ಮ ಫೋನ್ ನಿಮ್ಮ ಕೈಯಲ್ಲಿದ್ದರೂ ಅದರ ಕಂಟ್ರೋಲ್ ಯಾರೋ ಕಳ್ಳಕಾಕಾರ ಕೈಯಲ್ಲಿರುತ್ತೆ.
ಈ ಬಗ್ಗೆ ನೂರ್ ನಹೀದ್ ಖಾನ್ ಈಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ, ಕಳೆದುಹೋದ ಹಣ ವಾಪಸ್ ಬರುವುದು ಸುಲಭದ ಮಾತಲ್ಲ. ಬೆಂಗಳೂರಿನಲ್ಲಿ ಇಂತಹ ನೂರಾರು ವಂಚನೆಯ ಮೆಸೇಜ್‌ಗಳು ಈಗಲೂ ಹರಿದಾಡುತ್ತಿದ್ದು, ಸೈಬರ್ ಪೊಲೀಸರು ನಗರದ ಜನತೆಗೆ ರೆಡ್ ಅಲರ್ಟ್ ಘೋಷಿಸಿದ್ದಾರೆ.
ಸೈಬರ್ ತಜ್ಞರು ಹೇಳುವ ಪ್ರಕಾರ, ಅಪರಿಚಿತ ನಂಬರ್‌ಗಳಿಂದ ಬರುವ ಯಾವುದೇ ಲಿಂಕ್ ಅಥವಾ ಫೈಲ್ ಮೇಲೆ ಕ್ಲಿಕ್ ಮಾಡುವುದು ಅಕ್ಷರಶಃ ವಿಷ ಕುಡಿದಂತೆ. ಡಿಜಿಟಲ್ ಸಾಕ್ಷರತೆಯ ಕೊರತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಈ ಖದೀಮರು, ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಕನ್ನ ಹಾಕಲು ಕ್ಷಣ ಸಾಕು. ಮದುವೆ ಕಾರ್ಡ್ ಕಳುಹಿಸುವವರು ಸೀದಾ ಪೋಟೋ ಕಳುಹಿಸುತ್ತಾರೆಯೇ ಹೊರತು ಫೈಲ್ ಡೌನ್‌ಲೋಡ್ ಮಾಡಿ ಅನ್ನೋದಿಲ್ಲ. ಈ ಸಣ್ಣ ಲಾಜಿಕ್ ಮರೆತರೆ ನೀವು ಕೂಡ ಉದ್ಯಮಿ ಖಾನ್ ಅವರಂತೆ ಬೀದಿಗೆ ಬರುವ ಪರಿಸ್ಥಿತಿ ಎದುರಾಗಬಹುದು. ಎಚ್ಚರ..!



