ಬದುಕಿನಲ್ಲಿ ಎಲ್ಲವೂ ಇತ್ತು, ಕೈತುಂಬಾ ಸಂಬಳ ಬರುವ ಸರ್ಕಾರಿ ಕೆಲಸ ಇತ್ತು, ಪ್ರೀತಿಸುವ ಪತ್ನಿ ಹಾಗೂ 20 ದಿನಗಳ ಹಿಂದೆಯಷ್ಟೇ ಹುಟ್ಟಿದ್ದ ಮುದ್ದಾದ ಮಗು. ಆದರೆ, ಇವೆಲ್ಲದರ ನಡುವೆ ಒಂದು ದುಖ ಕಾಡುತ್ತಿತ್ತು. ಆ ದುಖವೇ ಇಂದು ಒಬ್ಬ ಪ್ರತಿಭಾವಂತ ಎಂಜಿನಿಯರ್ ಬದುಕನ್ನು ಬಲಿಪಡೆಯುವಂತೆ ಮಾಡಿದೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ PWD ಇಲಾಖೆಯ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ (AEE) ಆಗಿ ಕೆಲಸ ಮಾಡುತ್ತಿದ್ದ ಮಂಜುಪ್ರಸಾದ್, ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಮಂಜುಪ್ರಸಾದ್ ಅವರ ಸಾವಿಗೆ ಕಾರಣ ಕೇಳಿದರೆ ಕರುಳು ಹಿಂಡಿದಂತಾಗುತ್ತೆ.ಯಾಕೆಂದರೆ ಇವರ ಆತ್ಮ*ಹತ್ಯೆಗೆ ಯಾವುದೇ ಆರ್ಥಿಕ ಸಂಕಷ್ಟ ಅಥವಾ ಕೌಟುಂಬಿಕ ಕಲಹದ ಕತೆಯಲ್ಲ, ಬದಲಾಗಿ ತಾಯಿಯ ಮೇಲಿದ್ದ ಅತೀವ ಪ್ರೀತಿ ಮತ್ತು ಅವರ ಅಗಲಿಕೆಯಿಂದ ಉಂಟಾದ ಮಾನಸಿಕ ಖಿನ್ನತೆಯ ಕರಾಳ ಮುಖ.
ಹೌದು, ಸುಮಾರು ಒಂದೂವರೆ ವರ್ಷದ ಹಿಂದೆ ಮಂಜುಪ್ರಸಾದ್ ಅವರ ತಾಯಿ ನಿಧನರಾಗಿದ್ದರು. ತಾಯಿಯ ಕನಸಿನಂತೆಯೇ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ಇವರಿಗೆ ತಾಯಿಯೆಂದರೆ ಪ್ರಾಣ. ಅವರ ಅಗಲಿಕೆಯ ನಂತರ ಮಂಜುಪ್ರಸಾದ್ ಬದುಕು ಶೂನ್ಯವಾಗಿತ್ತು. ಮನೆ ಮುಂದೆಯೇ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದ ಅವರು, ಪ್ರತಿದಿನ ಎದ್ದ ಕೂಡಲೇ ಆ ಸಮಾಧಿಯನ್ನು ನೋಡಿಯೇ ದಿನ ಆರಂಭಿಸುತ್ತಿದ್ದರು.
ಖಿನ್ನತೆ ಅನ್ನೋದು ಮನುಷ್ಯನನ್ನು ಒಳಗಿನಿಂದ ಹೇಗೆ ಕುಗ್ಗಿಸುತ್ತದೆ ಎನ್ನುವುದಕ್ಕೆ ಮಂಜುಪ್ರಸಾದ್ ಅವರೇ ಸಾಕ್ಷಿ. ತಾಯಿ ತೀರಿಹೋದ ದಿನದಿಂದಲೂ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದಕ್ಕಾಗಿ ವೈದ್ಯರ ಬಳಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಈ ಹಿಂದೆಯೂ ಎರಡು ಬಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. ಇತ್ತೀಚೆಗೆ ಅವರಿಗೆ ಮಗುವಾದಾಗ, ಆ ಪುಟ್ಟ ಕಂದಮ್ಮನಲ್ಲೇ ತನ್ನ ತಾಯಿಯನ್ನು ಕಾಣುವ ಪ್ರಯತ್ನ ಮಾಡಿದ್ದರು. ಮಗುವಿಗೆ ತನ್ನ ತಾಯಿಯ ಹೆಸರಾದ ‘ಪುಟ್ಟಮ್ಮ’ ಎಂದೇ ಹೆಸರಿಟ್ಟು ಕರೆದು ಸಂಭ್ರಮಿಸಿದ್ದರು. ಆದರೆ, ಆ ಪುಟ್ಟ ಜೀವವೂ ಇವರನ್ನು ಈ ಜಗತ್ತಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.
ಘಟನೆಯ ದಿನ ಮಂಜುಪ್ರಸಾದ್ ಅವರು ಎಂದಿನಂತೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಕೊರಟಗೆರೆಯಲ್ಲಿದ್ದ ಪತ್ನಿಯ ನಿವಾಸಕ್ಕೆ ಭೇಟಿ ನೀಡಿ, ನಂತರ ಸಂಬಂಧಿಕರೊಬ್ಬರಿಗೆ ತಮ್ಮ ಮೊಬೈಲ್ ಫೋನ್ ಮತ್ತು ಮನೆಯ ಕೀಲಿ ಕೈ ಒಪ್ಪಿಸಿದ್ದರು. ಒಂದು ಮೀಟಿಂಗ್ ಇದೆ, ಹೋಗಿ ಬರುತ್ತೇನೆ ಎಂದು ಹೇಳಿ ಹೊರಟವರು ನೇರವಾಗಿ ಹೋಗಿದ್ದು ದೇವರಾಯನದುರ್ಗ ಬೆಟ್ಟಕ್ಕೆ. ಅಲ್ಲಿಂದ ಜಿಗಿದು ತಮ್ಮ ಬದುಕಿಗೆ ತಾವೇ ಅಂತ್ಯ ಹಾಡಿದ್ದಾರೆ. ಸಂಜೆವರೆಗೂ ಮನೆಗೆ ಮರಳದಿದ್ದಾಗ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಬೆಟ್ಟದ ಬುಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಕೇವಲ 33 ವರ್ಷದ ಈ ಯುವ ಇಂಜಿನಿಯರ್ ಸಾವಿನಿಂದಾಗಿ ಈಗ ಒಂದು ತುಂಬು ಸಂಸಾರ ಬೀದಿಗೆ ಬಂದಿದೆ. ನಾಲ್ಕು ವರ್ಷಗಳ ಹಿಂದೆ ಅದ್ದೂರಿಯಾಗಿ ಕೈಹಿಡಿದಿದ್ದ ಪತ್ನಿ ಈಗ ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ. ಇನ್ನೂ ಹನಿ ಹಾಲು ಕುಡಿಯುವ 20 ದಿನದ ಹಸುಗೂಸಿಗೆ ತಂದೆಯ ಮುಖ ನೋಡುವ ಭಾಗ್ಯವೂ ಇಲ್ಲದಂತಾಗಿದೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬೆಟ್ಟದಷ್ಟು ಕನಸು ಕಂಡಿದ್ದ ಮಗ, ಈಗ ಬೆಟ್ಟದ ಮೇಲಿಂದ ಜಿಗಿದು ಪ್ರಾಣ ಬಿಟ್ಟಿರುವುದು ದುರಂತ. ಆದರೆ ತಂದೆಯಿಲ್ಲದ ಮಗುವಿನ ಭವಿಷ್ಯವೇನು? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಕ್ಯಾತಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಇದು ತಾಯಿಯ ಅಗಲಿಕೆಯ ನೋವಿನಿಂದ ಉಂಟಾದ ಆತ್ಮಹತ್ಯೆ ಎಂದು ತಿಳಿದುಬಂದಿದ್ದರೂ, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಸತ್ಯಮಂಗಲದ ಅವರ ಮನೆಯ ಬಳಿ ಈಗ ನೀರವ ಮೌನ ಮನೆಮಾಡಿದೆ. ಗೆಳೆಯರ ಪಾಲಿಗೆ ಸ್ಫೂರ್ತಿಯಾಗಿದ್ದ ಒಬ್ಬ ಎಂಜಿನಿಯರ್ ಈ ರೀತಿ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ಅವರ ಸ್ನೇಹವಲಯಕ್ಕೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಾನಸಿಕ ಖಿನ್ನತೆ ಎಂಬುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಎಷ್ಟೇ ವಿದ್ಯಾವಂತರಾಗಿದ್ದರೂ ಮನಸ್ಸಿನ ಒಳಗಿನ ನೋವು ದೊಡ್ಡದಾದಾಗ ಇಂತಹ ದುರಂತಗಳು ಸಂಭವಿಸುತ್ತವೆ. ಮಂಜುಪ್ರಸಾದ್ ಅವರ ಸಾವು ಇಡೀ ಸಮಾಜಕ್ಕೆ ಒಂದು ಎಚ್ಚರಿಕೆಯ ಗಂಟೆ. ಕಣ್ಣಿಗೆ ಕಾಣುವ ಗಾಯಗಳಿಗೆ ಚಿಕಿತ್ಸೆ ನೀಡುವ ನಾವು, ಮನಸ್ಸಿನ ಒಳಗಿನ ನೋವಿಗೆ ಸ್ಪಂದಿಸುವುದನ್ನು ಮರೆಯುತ್ತಿದ್ದೇವೆಯೇ ಎಂಬ ಪ್ರಶ್ನೆ ಎದುರಾಗಿದೆ.ತಾಯಿಯ ನೆನಪಲ್ಲಿ ಬೆಟ್ಟದಿಂದ ಜಿಗಿದ ಮಂಜುಪ್ರಸಾದ್ ಅವರ ಈ ದುರಂತ ಅಂತ್ಯ ತುಮಕೂರು ಜಿಲ್ಲೆಯ ಜನರ ಕಣ್ಣನ್ನು ಒದ್ದೆ ಮಾಡಿದೆ.



