ಸಿಲಿಕಾನ್ ಸಿಟಿ, ಐಟಿ ಹಬ್, ಉದ್ಯಾನ ನಗರಿ.. ಹೀಗೆ ಬೆಂಗಳೂರಿಗೆ ಇರೋ ಬಣ್ಣಬಣ್ಣದ ಹೆಸರುಗಳು ಒಂದೆರಡಲ್ಲ. ಆದರೆ, ಈಗ ಈ ಮೆಟ್ರೋ ಸಿಟಿಯ ಮಗದೊಂದು ಕರಾಳ ಮುಖ ಬಯಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ 2024’ ವರದಿ ಕೇಳಿದರೆ ಅಕ್ಷರಶಃ ಎದೆ ನಡುಗುತ್ತದೆ. ವಿದ್ಯಾವಂತರೇ ಹೆಚ್ಚಿರೋ ಈ ನಗರದಲ್ಲಿ ವರದಕ್ಷಿಣೆ ಎಂಬ ಪಿಡುಗು ಹೆಮ್ಮರವಾಗಿ ಬೆಳೆದು ನಿಂತಿದೆ. ಇಡೀ ದೇಶದ ಮೆಟ್ರೋ ನಗರಗಳಲ್ಲೇ ಬೆಂಗಳೂರು ಈಗ ‘ವರದಕ್ಷಿಣೆ ರಾಜಧಾನಿ’ಯಾಗಿ ಹೊರಹೊಮ್ಮಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.
ವರದಿಯ ಅಂಕಿ-ಅಂಶಗಳನ್ನು ಗಮನಿಸಿದರೆ ಗಾಬರಿಯಾಗುತ್ತೆ. ದೇಶದ ಪ್ರಮುಖ ಮಹಾನಗರಗಳಲ್ಲಿ 2024ರಲ್ಲಿ ದಾಖಲಾದ ಒಟ್ಟು 1,008 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕರಣಗಳಲ್ಲಿ, ಬರೋಬ್ಬರಿ 878 ಪ್ರಕರಣಗಳು ದಾಖಲಾಗಿರುವುದು ಕೇವಲ ಬೆಂಗಳೂರಿನಲ್ಲಿ! ಅಂದರೆ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 87ರಷ್ಟು ಪಾಲು ನಮ್ಮ ಬೆಂಗಳೂರಿನದ್ದೇ ಆಗಿದೆ. 48 ಪ್ರಕರಣ ದಾಖಲಿಸಿರುವ ಲಕ್ನೋ ಎರಡನೇ ಸ್ಥಾನದಲ್ಲಿದೆ ಅಂದ್ರೆ, ಬೆಂಗಳೂರು ಎಷ್ಟು ಮುಂದಿದೆ ಅಂತ ನೀವೇ ಊಹಿಸಿ. ಈ ಅಂಕಿ-ಅಂಶಗಳು ನಗರದ ಸಾಂಸ್ಕೃತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಂತಿದೆ.
ಕೇವಲ ಕಿರುಕುಳ ಮಾತ್ರವಲ್ಲ, ವರದಕ್ಷಿಣೆಯ ದಾಹಕ್ಕೆ ಬೆಂಗಳೂರಿನಲ್ಲಿ ಕಳೆದ ವರ್ಷ 25 ಮಹಿಳೆಯರು ಬಲಿಯಾಗಿದ್ದಾರೆ. ದಕ್ಷಿಣ ಭಾರತದ ಇತರ ಪ್ರಮುಖ ನಗರಗಳಾದ ಚೆನ್ನೈ, ಕೊಚ್ಚಿ, ಕೊಯಮತ್ತೂರುಗಳಲ್ಲಿ ವರದಕ್ಷಿಣೆ ಸಾವು ‘ಶೂನ್ಯ’ ದಾಖಲಾಗಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಸಾವುಗಳ ಸಂಖ್ಯೆ ಏರುತ್ತಲೇ ಇರುವುದು ಆತಂಕಕಾರಿ. ದೆಹಲಿಯಲ್ಲಿ 109 ಸಾವುಗಳು ಸಂಭವಿಸಿದ್ದು ಸುಶಿಕ್ಷಿತರ ನಗರ ಎನಿಸಿಕೊಂಡ ಬೆಂಗಳೂರು ದಕ್ಷಿಣ ಭಾರತದ ‘ಡೆತ್ ಝೋನ್’ ನಂತೆ ಕಂಡು ಬರುತ್ತಿರುವುದು ನಿಜಕ್ಕೂ ಶೋಚನೀಯ.
ವರದಕ್ಷಿಣೆ ಒಂದೇ ಅಲ್ಲ, ಮಹಿಳೆಯರ ವಿರುದ್ಧದ ಒಟ್ಟಾರೆ ಅಪರಾಧಗಳಲ್ಲೂ ಬೆಂಗಳೂರು ಕುಖ್ಯಾತಿ ಗಳಿಸಿದೆ. ವಿಶೇಷ ಮತ್ತು ಸ್ಥಳೀಯ ಕಾನೂನು (SLL) ಅಡಿಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಪೈಕಿ 1,501 ಪ್ರಕರಣಗಳೊಂದಿಗೆ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ, ಸ್ವತಂತ್ರವಾಗಿ ಬದುಕುವ ಹೆಣ್ಣುಮಕ್ಕಳು ಈ ನಗರದಲ್ಲಿ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆಗೆ ಈ ವರದಿ ಖಡಕ್ ಉತ್ತರ ನೀಡುತ್ತಿದೆ.
ಇನ್ನು ಬೀದಿಗಳಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೈಹಿಕ ಬಲಪ್ರಯೋಗದ ವಿಚಾರಕ್ಕೆ ಬಂದರೆ, ಬೆಂಗಳೂರು ಇಲ್ಲಿಯೂ ಮುಂಚೂಣಿಯಲ್ಲಿದೆ. 897 ಪ್ರಕರಣಗಳೊಂದಿಗೆ ಮುಂಬೈನ್ನೂ (857) ಹಿಂದಿಕ್ಕಿ ಬೆಂಗಳೂರು ನಂಬರ್ 1 ಸ್ಥಾನಕ್ಕೆ ಏರಿದೆ. ಹಗಲು ರಾತ್ರಿ ಪೊಲೀಸ್ ಪೆಟ್ರೋಲಿಂಗ್, ಸಿಸಿಟಿವಿ ಅಂತ ಏನೇ ಅಂದರೂ, ಹೆಣ್ಣುಮಕ್ಕಳ ಮೇಲೆ ಕೈ ಮಾಡುವ ಕಿರಾತಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುವುದು ಕಹಿ ಸತ್ಯ.
ಪತ್ನಿಯ ಮೇಲೆ ಪತಿಯೇ ನಡೆಸುವ ದೌರ್ಜನ್ಯಗಳ ವಿಷಯದಲ್ಲೂ ರಾಜ್ಯದಲ್ಲಿ 2,947 ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಂಖ್ಯೆ ಕಡಿಮೆ ಇರಬಹುದು. ಆದರೆ, ‘ಪ್ರಗತಿಪರ ರಾಜ್ಯ’ ಎಂಬ ಹಣೆಪಟ್ಟಿ ಹೊತ್ತಿರುವ ಕರ್ನಾಟಕದಲ್ಲಿ ಮನೆಯ ಒಳಗೇ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಹಣ, ಅಂತಸ್ತಿನ ಹಿಂದೆ ಬಿದ್ದಿರುವ ಇಂದಿನ ಸಮಾಜದಲ್ಲಿ ಹೆಣ್ಣು ಕೇವಲ ಒಂದು ವಸ್ತು ಎಂಬಂತೆ ಬಿಂಬಿತವಾಗುತ್ತಿರುವುದು ದುರಂತ.
ಒಟ್ಟಿನಲ್ಲಿ, ‘ಕ್ರೈಮ್ ಇನ್ ಇಂಡಿಯಾ 2024’ ವರದಿಯು ಬೆಂಗಳೂರಿನ ಪಾಲಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಆಕಾಶಚುಂಬಿ ಕಟ್ಟಡಗಳು, ಐಟಿ ಪಾರ್ಕ್‌ಗಳು ಇದ್ದರೆ ಸಾಲದು, ಅಲ್ಲಿ ಬದುಕುವ ಹೆಣ್ಣುಮಕ್ಕಳಿಗೆ ಗೌರವ ಮತ್ತು ಸುರಕ್ಷತೆ ಸಿಕ್ಕಾಗ ಮಾತ್ರ ಬೆಂಗಳೂರು ನಿಜವಾದ ‘ಜಾಗತಿಕ ನಗರ’ ಎನಿಸಿಕೊಳ್ಳಲು ಸಾಧ್ಯ. ವರದಕ್ಷಿಣೆ ಎಂಬ ಈ ಮಹಾಮಾರಿಯನ್ನು ಈಗಲೇ ಚಿವುಟಿ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ಅಪರಾಧಗಳ ಕೂಪವಾಗುವುದರಲ್ಲಿ ಸಂಶಯವೇ ಇಲ್ಲ.



