No menu items!
19.9 C
Munich
Thursday, June 4, 2026

ರಾಜ್ಯದಲ್ಲಿ ಒಂದೇ ದಿನ ಎರಡು ಭೀಕರ ರಸ್ತೆ ಅಪಘಾತ: 7 ತಿಂಗಳ ಮಗು ಸೇರಿ ನಾಲ್ವರು ಸಾವು

Must read

ರಾಜ್ಯದಲ್ಲಿ ಒಂದೇ ದಿನ ಎರಡು ಭೀಕರ ರಸ್ತೆ ಅಪಘಾತ: 7 ತಿಂಗಳ ಮಗು ಸೇರಿ ನಾಲ್ವರು ಸಾವು

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ 7 ತಿಂಗಳ ಹಸುಗೂಸು ಹಾಗೂ ವೃದ್ಧ ದಂಪತಿ ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಈ ದುರಂತಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮುಬಾರಕ್ (70) ಹಾಗೂ ಕೇವಲ 7 ತಿಂಗಳ ಹಸುಗೂಸು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಚಾಮರಾಜನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇನ್ನೊಂದೆಡೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಸಾದಲಿ ಕ್ರಾಸ್ ಬಳಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.
ಟಿವಿಎಸ್ ಎಕ್ಸ್ಎಲ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೃದ್ಧ ದಂಪತಿಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಬಸ್ ಡಿಕ್ಕಿ ಹೊಡೆದಿದೆ. ಕದರಿಯಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಬಸ್ ಬರುತ್ತಿರುವುದನ್ನು ಗಮನಿಸದೆ ದ್ವಿಚಕ್ರ ವಾಹನ ಸವಾರರು ಏಕಾಏಕಿ ರಸ್ತೆ ತಿರುವು ಪಡೆದಿರುವುದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಲಕ್ಷ್ಮಣ (75) ಹಾಗೂ ಅವರ ಪತ್ನಿ ರತ್ನಮ್ಮ (70) ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಶಿಡ್ಲಘಟ್ಟ ತಾಲ್ಲೂಕಿನ ತಿರುಕಾಚೇನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಘಟನೆ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article