ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿಗೆ ಭೀಕರ ಅಪಘಾತ; ಲಾರಿ-ಓಮ್ನಿ ಡಿಕ್ಕಿಗೆ ಐವರ ದುರ್ಮರಣ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮ್ನಿ ವಾಹನದಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ಲಾರಿ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಓಮ್ನಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25), ರಮೇಶ್ ಬಳ್ಳಾರಿ (45) ಹಾಗೂ ಪ್ರವೀಣ್ ಬಾಳೆಕಾಯಿ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಿನ್ಮಯ (30) ಅವರನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಒಟ್ಟು ಆರು ಮಂದಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಅವರಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.



