‘ಬಸವ ಮಂಟಪ’ ಪುಸ್ತಕ ವಿವಾದ ತೀವ್ರ! ಪೊಲೀಸ್ ಠಾಣೆಗೆ ದೂರು, ಪುಸ್ತಕ ಸುಟ್ಟು ಆಕ್ರೋಶ; ನಿಷೇಧಕ್ಕೆ ಸಚಿವರ ಒತ್ತಾಯ
ಬೆಂಗಳೂರು: ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿ ಅಂಶಗಳನ್ನು ಒಳಗೊಂಡಿದೆ ಎಂಬ ಆರೋಪ ಎದುರಿಸುತ್ತಿರುವ ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಪುಸ್ತಕದ ವಿರುದ್ಧ ಆಕ್ರೋಶ ತೀವ್ರಗೊಂಡಿದೆ. ಪುಸ್ತಕವನ್ನು ನಿಷೇಧಿಸುವಂತೆ ಬಸವಣ್ಣನವರ ಅನುಯಾಯಿಗಳು ಹಾಗೂ ಹಲವು ಸಚಿವರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಲೇಖಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬೆಂಗಳೂರಿನಲ್ಲಿ ಪುಸ್ತಕ ಸುಟ್ಟು ಪ್ರತಿಭಟನೆ ನಡೆಸಲಾಗಿದೆ.
ರವಿ ಹಂಜ್ ವಿರುದ್ಧ ಪೊಲೀಸ್ ಠಾಣೆಗೆ ದೂರು
ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ಬಸವಣ್ಣನವರ ಅನುಯಾಯಿಗಳ ನಿಯೋಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ಲೇಖಕ ರವಿ ಹಂಜ್ ವಿರುದ್ಧ ದೂರು ಸಲ್ಲಿಸಿದೆ. ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಉಲ್ಲೇಖಿಸಲಾಗಿದೆ ಎಂದು ಆರೋಪಿಸಿರುವ ನಿಯೋಗ, ಲೇಖಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಇದೇ ವೇಳೆ ಬೆಂಗಳೂರಿನ ಬಸವ ಸಮಿತಿ ಆವರಣದಲ್ಲಿ ಬಸವಣ್ಣನವರ ಅನುಯಾಯಿಗಳು ‘ಬಸವ ಮಂಟಪ’ ಪುಸ್ತಕವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿ ಹಂಜ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಪುಸ್ತಕದಲ್ಲಿರುವ ಅಂಶಗಳು ಬಸವಣ್ಣನವರ ಘನತೆಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿದ್ದಾರೆ. ಪುಸ್ತಕವನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನ: ಎಂ.ಬಿ. ಪಾಟೀಲ್
ಪುಸ್ತಕದ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಶರಣಪ್ರಕಾಶ್ ಅವರೊಂದಿಗೆ ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಎಂ.ಬಿ. ಪಾಟೀಲ್, ಬಸವಣ್ಣನವರನ್ನು ಅವಹೇಳನ ಮಾಡಿರುವುದರಿಂದ ರಾಜ್ಯಾದ್ಯಂತ ಅವರ ಅನುಯಾಯಿಗಳ ಭಾವನೆಗಳಿಗೆ ನೋವಾಗಿದೆ ಎಂದು ಹೇಳಿದ್ದಾರೆ.
ಬಸವಣ್ಣನವರು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತವಾದವರಲ್ಲ. ಮನುಷ್ಯತ್ವವೇ ಧರ್ಮ ಎಂಬ ಸಂದೇಶ ಸಾರಿದ ಮಹಾನ್ ವ್ಯಕ್ತಿ. ಸಂಕವ್ವ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹಾಗೂ ಅಂಬಿಗರ ಚೌಡಯ್ಯ ಸೇರಿದಂತೆ ವಿವಿಧ ಸಮುದಾಯಗಳ ಶರಣರಿಗೆ ಅನುಭವ ಮಂಟಪದಲ್ಲಿ ಸ್ಥಾನ ಕಲ್ಪಿಸಿದವರು. ಅಂತಹ ಬಸವಣ್ಣನವರನ್ನು ಕೊಲೆಗಡುಕ ಮತ್ತು ಲೂಟಿಕೋರ ಎಂದು ಬಿಂಬಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರ ಭಟ್ ವಿರುದ್ಧವೂ ಸಚಿವರ ಆರೋಪ
ಈ ವಿವಾದದ ಹಿಂದೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಪಾತ್ರವಿದೆ ಎಂದು ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ರವಿ ಹಂಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಲೇಖಕರನ್ನು ಕ್ರಿಮಿನಲ್ ಎಂದು ಕರೆದಿದ್ದು, ಬಸವಣ್ಣನವರನ್ನೂ ಅದೇ ರೀತಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಸವಣ್ಣನವರ ವಚನಗಳನ್ನು ತಿರುಚುವ ಪ್ರಯತ್ನ ನಡೆದಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಸವ ಸಂಸ್ಕೃತಿಯ ಮೇಲೆ ದಾಳಿ ನಡೆದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪುಸ್ತಕಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಶಂಕರ ಬಿದರಿ ಹಾಗೂ ಮನು ಬಳಿಗಾರ್ ಚಪ್ಪಾಳೆ ತಟ್ಟಿದ್ದಾರೆ ಎಂದು ಪ್ರಸ್ತಾಪಿಸಿದ ಸಚಿವರು, ಅವರನ್ನು ಆಧುನಿಕ ಕೊಂಡಿ ಮಂಚಣ್ಣನವರಿಗೆ ಹೋಲಿಸಿ ಟೀಕಿಸಿದ್ದಾರೆ.
‘ಬಸವ ಮಂಟಪ’ ಪುಸ್ತಕ ಮುಟ್ಟುಗೋಲಿಗೆ ಈಶ್ವರ ಖಂಡ್ರೆ ಒತ್ತಾಯ
ಮತ್ತೊಂದೆಡೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಖಂಡ್ರೆ, ವಿವಾದಾತ್ಮಕ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಸವಣ್ಣನವರು ಹಾಗೂ ಲಿಂಗಾಯತ ಸಮುದಾಯದ ಕುರಿತು ರವಿ ಹಂಜ್ ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಬಂಧಿತ ವಿಡಿಯೋಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎಂದು ಕರೆಯುವುದು ಹಾಗೂ ಬಿಜ್ಜಳನ ಖಜಾನೆಯನ್ನು ದುರುಪಯೋಗಪಡಿಸಿಕೊಂಡು ಶರಣ ದಾಸೋಹ ನಡೆಸಿದ್ದಾರೆ ಎಂಬ ರೀತಿಯ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ: ಶಿವರಾಜ್ ತಂಗಡಗಿ
ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೂಡ ಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರ ಇತಿಹಾಸದ ಬಗ್ಗೆ ಸರಿಯಾದ ಅರಿವಿಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಪ್ರಚಾರಕ್ಕಾಗಿ ಇಂತಹ ವಿವಾದಗಳನ್ನು ಸೃಷ್ಟಿಸಬಾರದು ಎಂದು ಹೇಳಿದ್ದಾರೆ.
ಬಸವಣ್ಣನವರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸಚಿವ ಸಂಪುಟ ಸಭೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ‘ಬಸವ ಮಂಟಪ’ ಪುಸ್ತಕದ ವಿರುದ್ಧ ಪೊಲೀಸ್ ದೂರು, ಪ್ರತಿಭಟನೆ ಹಾಗೂ ಸಚಿವರ ಆಕ್ಷೇಪಗಳು ವ್ಯಕ್ತವಾಗಿದ್ದು, ಪುಸ್ತಕದ ಮುಟ್ಟುಗೋಲು ಅಥವಾ ನಿಷೇಧದ ಬೇಡಿಕೆ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.



