12–13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ಪ್ರಧಾನಿ ಮೋದಿ

Must read

12–13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ಕಳೆದ 12ರಿಂದ 13 ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ 100ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಮುಂದಿನ ಅಭಿವೃದ್ಧಿಯ ಗುರಿಗಳ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
1970ರ ದಶಕದಲ್ಲೇ ದೇಶದಲ್ಲಿ ಬಡತನ ನಿರ್ಮೂಲನೆಯ ಘೋಷಣೆಗಳು ಕೇಳಿಬಂದಿದ್ದವು. ಆದರೆ ಅಂದಿನ ಸರ್ಕಾರಗಳ ನೀತಿ ಹಾಗೂ ಉದ್ದೇಶಗಳಲ್ಲಿ ಕೊರತೆಯಿತ್ತು ಎಂದು ಮೋದಿ ಟೀಕಿಸಿದ್ದಾರೆ. ಸರಿಯಾದ ಉದ್ದೇಶ ಮತ್ತು ಯೋಜನೆಗಳೊಂದಿಗೆ ಸರ್ಕಾರ ಕೆಲಸ ಮಾಡಿದರೆ ಬದಲಾವಣೆ ತರಲು ಸಾಧ್ಯ. ಕಳೆದ 12ರಿಂದ 13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆ ಹಲವು ಏರಿಳಿತಗಳನ್ನು ಕಂಡಿದೆ. ಲೈಸೆನ್ಸ್-ಕೋಟಾ ವ್ಯವಸ್ಥೆ, ರಾಷ್ಟ್ರೀಕರಣದ ಪ್ರಯೋಗಗಳು ಹಾಗೂ ಜಗತ್ತಿನ ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಭಾರತ, ಕಳೆದ 12 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ದೇಶದ ಈ ಪ್ರಗತಿಯಲ್ಲಿ ಯುವಕರು, ರೈತರು, ಕಾರ್ಮಿಕರು ಹಾಗೂ ಉದ್ಯಮಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಇದೇ ವೇಳೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಪ್ರಧಾನಿ ಪ್ರಸ್ತಾಪಿಸಿದ್ದಾರೆ. ದೇಶದ ಉದ್ಯಮಿಗಳು ಮುಂದಿನ 20 ವರ್ಷಗಳ ಗುರಿಗಳನ್ನು ಈಗಿನಿಂದಲೇ ರೂಪಿಸಿಕೊಳ್ಳಬೇಕು. ದೀರ್ಘಾವಧಿಯ ಹೂಡಿಕೆ ನಿರ್ಧಾರಗಳಲ್ಲಿ ‘ಭಾರತ ಮೊದಲು’ ಎಂಬ ತತ್ವಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.
ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿರುವ ಉತ್ಪನ್ನಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿ, ಜಾಗತಿಕ ಮಾರುಕಟ್ಟೆಗೆ ಪೂರೈಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.
ಇನ್ನು ಔಷಧ ಉದ್ಯಮದ ಬಗ್ಗೆಯೂ ಮಾತನಾಡಿದ ಮೋದಿ, ಭಾರತವನ್ನು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತಿದ್ದರೂ ಔಷಧ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳು ಹಾಗೂ ಮಧ್ಯವರ್ತಿ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯ ಉತ್ಪಾದನೆ ಹೆಚ್ಚಿಸಬೇಕು. ಹೊಸ ತಂತ್ರಜ್ಞಾನ ಹಾಗೂ ಉತ್ಪಾದನಾ ಘಟಕಗಳಲ್ಲಿ ಔಷಧ ಕಂಪನಿಗಳು ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article