No menu items!
17.6 C
Munich
Thursday, April 23, 2026

ಕಾರಿನ EMIಗಾಗಿ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ: ಯುವಕ ಬಂಧನ

Must read

ಕಾರಿನ EMIಗಾಗಿ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ: ಯುವಕ ಬಂಧನ

ಬೆಂಗಳೂರು: ಕಾರಿನ ಇಎಂಐ ಕಟ್ಟಲು ಹಣದ ಅಭಾವದಿಂದ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ನಡೆಸಿದ ಯುವಕನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ನಿವಾಸಿ ಶರತ್ ಕುಮಾರ್ (31) ಬಂಧಿತ ಆರೋಪಿ. ಬಸವನಗುಡಿಯ ತ್ಯಾಗರಾಜನಗರದಲ್ಲಿರುವ ಮನೆಯೊಂದರಲ್ಲಿ ಆರೋಪಿಯ ದೊಡ್ಡಮ್ಮ ಕಳೆದ 25 ವರ್ಷಗಳಿಂದ ಮನೆಕೆಲಸ ಮಾಡುತ್ತಿದ್ದರು. ಮನೆ ಮಾಲೀಕರು ನಂಬಿಕೆಯ ಆಧಾರದಲ್ಲಿ ಆಕೆಗೆ ಅದೇ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ್ದರು.

ಮನೆ ಮಾಲಕಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ವಿಶ್ವಾಸದಿಂದ ಮನೆಯ ಮತ್ತೊಂದು ಬೀಗದ ಕೀಲಿಯನ್ನು ಮನೆಕೆಲಸದಾಕೆಗೆ ನೀಡಿದ್ದರು. ಶರತ್ ಆಗಾಗ ದೊಡ್ಡಮ್ಮನಿಗೆ ಊಟ ನೀಡಲು ಮನೆಗೆ ಬರುತ್ತಿದ್ದ. ಈ ವೇಳೆ ಮನೆ ಮಾಲೀಕರು ಹೊರಗಿದ್ದ ಸಂದರ್ಭವನ್ನು ಗಮನಿಸಿದ ಆತ, ದೊಡ್ಡಮ್ಮನಿಗೆ ತಿಳಿಯದಂತೆ ಆಕೆಯ ಬಳಿಯಿದ್ದ ಬೀಗದ ಕೀಲಿಯನ್ನು ಪಡೆದು ಕಳೆದ ವರ್ಷ ಅಕ್ಟೋಬರ್ 22ರಂದು ಕಳ್ಳತನ ಎಸಗಿದ್ದಾನೆ.

ಚಿನ್ನಾಭರಣ ಕಳುವಾದ ಬಳಿಕ ಮನೆ ಮಾಲೀಕರು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಮನೆಕೆಲಸದಾಕೆ ಕೃತ್ಯದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದರು. ನಂತರ ಆರೋಪಿಯನ್ನು ವಿಚಾರಣೆ ನಡೆಸಿದಾಗ, ಕಾರಿನ ಇಎಂಐ ಪಾವತಿಸಲು ಹಣದ ಕೊರತೆ ಇದ್ದುದರಿಂದ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಬಂಧನದ ನಂತರವೇ ಈ ವಿಚಾರ ಆರೋಪಿಯ ದೊಡ್ಡಮ್ಮನಿಗೂ ತಿಳಿದುಬಂದಿದ್ದು, ಪ್ರಕರಣದಲ್ಲಿ ಆಕೆಯ ಯಾವುದೇ ಪಾತ್ರವಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿದೆ. ಬಂಧಿತನಿಂದ 36 ಲಕ್ಷ ರೂ. ಮೌಲ್ಯದ 241 ಗ್ರಾಂ ಚಿನ್ನಾಭರಣ, 2.8 ಕೆ.ಜಿ. ಬೆಳ್ಳಿ ಹಾಗೂ 1.30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಬಸವನಗುಡಿ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.

- Advertisement -spot_img

More articles

- Advertisement -spot_img

Latest article