No menu items!
30.6 C
Munich
Wednesday, August 12, 2026

ನೀಟ್ ಜ್ವಾಲೆ: ಯಾವುದೇ ಜಾಗ, ಯಾವ ಸಮಯದಲ್ಲೂ ಚರ್ಚೆಗೆ ಸಿದ್ಧ ಎಂದ ಸರ್ಕಾರ, ಒಪ್ತಾರಾ ಪ್ರತಿಭಟನಾನಿರತರು?

Must read

ದಿನ ಬೆಳಗಾದ್ರೆ ಸಾಕು ಇಡೀ ದೇಶದ ಗಮನ ಈಗ ದೆಹಲಿಯ ಜಂತರ್ ಮಂತರ್ ಕಡೆ ನೆಟ್ಟಿದೆ. ನೀಟ್ (NEET) ಪೇಪರ್ ಲೀಕ್ ಹಗರಣದ ಕಿಚ್ಚು ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆಯೇ ಹೊರತು ತಣ್ಣಗಾಗೋ ಯಾವುದೇ ಲಕ್ಷಣಗಳಂತೂ ಕಾಣಿಸ್ತಿಲ್ಲ. ಸಾವಿರಾರು ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರು ಬೀದಿಗಿಳಿದು ಆಕ್ರೋಶ ಹೊರಹಾಕ್ತಿದ್ರೆ, ಅತ್ತ ಕೇಂದ್ರ ಸರ್ಕಾರ ಕೂಡ ಪ್ರಕರಣವನ್ನು ಶಾಂತಗೊಳಿಸಲು ಸತತ ಸರ್ಕಸ್ ನಡೆಸುತ್ತಿದೆ. ಇದೀಗ ಬಂದಿರೋ ದೊಡ್ಡ ಅಪ್‌ಡೇಟ್ ಏನಪ್ಪಾ ಅಂದ್ರೆ, ಧರಣಿ ನಿರತ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರನ್ನು ಸಂಧಾನ ಚರ್ಚೆಗೆ ಬರುವಂತೆ ಕೇಂದ್ರ ಸರ್ಕಾರ ಬರೋಬ್ಬರಿ 4ನೇ ಬಾರಿಗೆ ಆಹ್ವಾನಿಸಿದೆ

ಸಿಜೆಪಿಗೆ ಕೇಂದ್ರದ 4ನೇ ಪ್ರಸ್ತಾವನೆ: ಸಚಿವ ಜಿತೇಂದ್ರ ಸಿಂಗ್ ಸ್ಪಷ್ಟನೆ

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸ್ವತಃ ಈ ಆಹ್ವಾನದ ಬಗ್ಗೆ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನದಿಂದಲೇ ಸಿಜೆಪಿ ಪ್ರತಿನಿಧಿಗಳಿಗೆ ಮಾತುಕತೆಗೆ ಬನ್ನಿ ಅಂತ ಆಹ್ವಾನ ಕಳುಹಿಸ್ತಾ ಇದ್ದೀವಿ. ಇದುವರೆಗೂ 4 ಅಧಿಕೃತ ಪ್ರಸ್ತಾವನೆಗಳನ್ನು ತಲುಪಿಸಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಯಾವುದೇ ಪ್ರತಿಷ್ಠೆಗೆ ಬಿದ್ದಿಲ್ಲ. ನಮ್ಮ ಯುವ ಸ್ನೇಹಿತರಿಗೆ ಅನುಕೂಲವಾಗುವ ಯಾವುದೇ ಸಮಯದಲ್ಲಿ, ಯಾವುದೇ ವಿಷಯದ ಬಗ್ಗೆಯಾದರೂ ಚರ್ಚಿಸಲು ನಾವು ಸಂಪೂರ್ಣ ಮುಕ್ತವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ನಡ್ಡಾ ಆಫೀಸ್ ಅಥವಾ ಮನೆ: ಸಭೆಗೆ ಸ್ಥಳ ನಿಗದಿ ಮಾಡಿದ ಸರ್ಕಾರ

ಈ ಸಂಧಾನದ ಸಭೆಯನ್ನು ಎಲ್ಲಿ ಬೇಕಾದರೂ ನಡೆಸಲು ಸರ್ಕಾರ ಸಿದ್ಧವಿದೆ ಅನ್ನೋ ಮೆಸೇಜ್ ಕೂಡ ರವಾನೆಯಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಕಚೇರಿ ಅಥವಾ ಅವರ ಅಧಿಕೃತ ನಿವಾಸ, ಇವೆರಡರಲ್ಲಿ ಎಲ್ಲಿ ಬೇಕಾದರೂ ಸಭೆ ಇಟ್ಟುಕೊಳ್ಳೋಣ ಅಂತ ಜಿತೇಂದ್ರ ಸಿಂಗ್ ಹೇಳಿದ್ದಾರೆ. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಕಲ್ಯಾಣವೇ ನಮಗೆ ಮುಖ್ಯ. ಜೆ.ಪಿ. ನಡ್ಡಾ ಹಾಗೂ ನಾನು ಸ್ವತಃ ಈ ಚರ್ಚೆಯಲ್ಲಿ ಭಾಗವಹಿಸುತ್ತೇವೆ. ಮಾತುಕತೆಯೊಂದೇ ಈ ಸಮಸ್ಯೆಗೆ ಸರಿಯಾದ ಪರಿಹಾರ ತಂದುಕೊಡಬಲ್ಲದು ಎಂದು ಜಿತೇಂದ್ರ ಸಿಂಗ್ ವಿದ್ಯಾರ್ಥಿ ಮುಖಂಡರಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್ ಅಸ್ತ್ರ ಪ್ರಯೋಗಿಸಿದ ಪ್ರಧಾನಿ ಮೋದಿ!

ಮತ್ತೊಂದೆಡೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಈ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದಾರೆ. ನೀಟ್ ಪೇಪರ್ ಲೀಕ್‌ನಂತಹ ಮಹಾಪಾಪವೆಸಗಿದ ಅಪರಾಧಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ತುರ್ತು ನ್ಯಾಯ ಒದಗಿಸಲು ದೇಶದಲ್ಲಿ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವುದೇ ತಮ್ಮ ಸರ್ಕಾರದ ಮೊದಲ ಆದ್ಯತೆ ಅಂತ ಮೋದಿ ಅಭಯ ನೀಡಿದ್ದರೂ, ದೆಹಲಿಯ ರಸ್ತೆಗಳಲ್ಲಿ ಧರಣಿ ಕೂತಿರೋ ವಿದ್ಯಾರ್ಥಿಗಳ ಆಕ್ರೋಶ ಮಾತ್ರ ಕಮ್ಮಿಯಾಗಿಲ್ಲ.

ರಾಜೀನಾಮೆಗೆ ಪಟ್ಟು: ಸಚಿವರ ವಿಕೆಟ್‌ಗೆ ಸಿಜೆಪಿ ನಾಯಕರ ಡಿಮ್ಯಾಂಡ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬೆನ್ನಲ್ಲೇ ಕೇಂದ್ರದಿಂದ ಈ ಆಫರ್ ಹರಿದುಬಂದಿದೆ. ಆದರೆ, ಸಿಜೆಪಿ (CJP) ನಾಯಕರು ಮಾತ್ರ ಕೇಂದ್ರದ ಈ ‘ಸಾಫ್ಟ್ ಕಾರ್ನರ್’ಗೆ ಕ್ಯಾರೇ ಅನ್ನುವಂತೆ ಕಾಣುತ್ತಿಲ್ಲ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹಾಗೂ ವಕ್ತಾರ ಅಶುತೋಷ್ ರಂಕಾ ಇಬ್ಬರೂ ತಮ್ಮ ಪಟ್ಟು ಸಡಿಲಿಸಿಲ್ಲ. ಶಿಕ್ಷಣ ಸಚಿವರು ರಾಜೀನಾಮೆ ನೀಡುವವರೆಗೂ ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಎಚ್ಚರಿಸಿದ್ದಾರೆ.

ಜಂತರ್ ಮಂತರ್‌ಗೇ ಬನ್ನಿ : ಕೇಂದ್ರಕ್ಕೆ ವಿದ್ಯಾರ್ಥಿ ನಾಯಕರ ಸವಾಲ್

ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಮಾತುಕತೆಗೆ ಇಟ್ಟಿರೋ ಸ್ಥಳದ ಪ್ರಸ್ತಾವನೆಗೂ ಸಿಜೆಪಿ ನಾಯಕರು ತಮ್ಮದೇ ಆದ ಹೊಸ ಷರತ್ತು ವಿಧಿಸಿದ್ದಾರೆ. ಸರ್ಕಾರಕ್ಕೆ ನಿಜವಾಗಿಯೂ ಮಾತುಕತೆ ನಡೆಸುವ ಮನಸ್ಸಿದ್ದರೆ, ಅವರು ನಮ್ಮ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಬರಲಿ ಅಥವಾ ಯಾವುದಾದರೂ ತಟಸ್ಥ (Neutral) ಜಾಗಕ್ಕೆ ಬರಲಿ. ಬಂದ ಮೇಲೆ ಅವರು ನಮ್ಮ ಷರತ್ತುಗಳಿಗೆ ಬದ್ಧವಾಗಿರಬೇಕು ಎಂದು ಅಭಿಜೀತ್ ದಿಪ್ಕೆ ಸವಾಲೆಸೆದಿದ್ದಾರೆ. ಅತ್ತ ಜಂತರ್ ಮಂತರ್‌ನಲ್ಲಿ ಧರಣಿ, ಇತ್ತ ಎಸಿ ರೂಮ್‌ಗಳ ಪ್ರಸ್ತಾವನೆಗಳ ನಡುವೆ ಈ ಮಾತುಕತೆ ಎಲ್ಲಿಗೆ ಹೋಗಿ ತಲುಪುತ್ತೋ ಕಾದುನೋಡಬೇಕಿದೆ.

ಆಸ್ಪತ್ರೆಯಿಂದಲೇ ಸೋನಮ್ ವಾಂಗ್‌ಚುಕ್ ಸಂದೇಶ

ಈ ಎಲ್ಲಾ ಹೈಡ್ರಾಮಾಗಳ ನಡುವೆ ಆಸ್ಪತ್ರೆಗೆ ದಾಖಲಾಗಿರೋ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ನಡೆ ಕೂಡ ತೀವ್ರ ಕುತೂಹಲ ಮೂಡಿಸಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಪೊಲೀಸ್ ಕೇಸ್‌ಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಕೈಬಿಟ್ಟರೆ ನಾನು ಕೈಗೊಂಡಿರುವ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುತ್ತೇನೆ ಎಂದು ಅವರು ಆಸ್ಪತ್ರೆಯ ಮಂಚದಿಂದಲೇ ಭರವಸೆ ನೀಡಿದ್ದಾರೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಮುಂದೇನು? ತಣ್ಣಗಾಗುತ್ತಾ ನೀಟ್ ಕಿಚ್ಚು?

ಒಟ್ಟಿನಲ್ಲಿ, ನೀಟ್ ಅಕ್ರಮ ಎಬ್ಬಿಸಿರೋ ಈ ಭಾರಿ ಚಂಡಮಾರುತಕ್ಕೆ ಸಂಸತ್ತು ಮತ್ತು ದೆಹಲಿ ಬೀದಿಗಳು ಕಂಗಾಲಾಗಿವೆ. ವಿದ್ಯಾರ್ಥಿಗಳ ಕಡೆಯಿಂದ ಶಿಕ್ಷಣ ಸಚಿವರ ವಿಕೆಟ್ ಬೀಳಲೇಬೇಕು ಅನ್ನೋ ಹಠ ಒಂದೆಡೆಯಾದರೆ, ಮಾತುಕತೆಯೊಂದೇ ದಾರಿ ಅಂತ ಕೈಚಾಚಿ ನಿಂತಿರೋ ಕೇಂದ್ರ ಸರ್ಕಾರ ಇನ್ನೊಂದೆಡೆ. CJP ಬಾಗಿಲು ತಟ್ಟಿರೋ ಈ 4ನೇ ಆಹ್ವಾನಕ್ಕೆ ಅಂತಿಮವಾಗಿ ಧರಣಿನಿರತರು ಓಕೆ ಅಂತಾರಾ ಅಥವಾ ಹೋರಾಟ ಇನ್ನಷ್ಟು ಉಗ್ರರೂಪ ಪಡೆಯುತ್ತಾ ಅನ್ನೋದನ್ನು ಇಡೀ ದೇಶವೇ ಕಾತುರದಿಂದ ವೀಕ್ಷಿಸುತ್ತಿದೆ.

- Advertisement -spot_img

More articles

- Advertisement -spot_img

Latest article