KPSC 384 ಹುದ್ದೆಗಳ ನೇಮಕಾತಿ ಅಕ್ರಮ ಆರೋಪ: ಶಾಂತ ಹೊಸಮನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಎರಡನೇ ಆರೋಪಿ ಶಾಂತ ಹೊಸಮನಿ (Shanta Hosamani) ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಶಾಂತ ಹೊಸಮನಿ ಅವರು ಸಲ್ಲಿ ಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ವಾದ ಮಂಡಿಸಿ, “ಅಭ್ಯರ್ಥಿಗಳಿಗೆ ಅಕ್ರಮವಾಗಿ ಅಂಕ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಶಾಂತ ಹೊಸಮನಿ ಅವರು ಎರಡನೇ ಆರೋಪಿಯಾಗಿದ್ದಾರೆ” ಎಂದು ಪೀಠದ ಗಮನಕ್ಕೆ ತಂದರು.
ವಿಚಾರಣೆ ವೇಳೆ ಕೆಪಿಎಸ್ಸಿ ಪರ ವಕೀಲೆ ಎಂ.ಆರ್. ಸಿಂಚನಾ ಅವರು ಸಹಾಯಕ ಕಾರ್ಯದರ್ಶಿ ನೀಡಿದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ಹಂತದಲ್ಲಿ ಪೀಠವು, “ಈ ವರದಿಯನ್ನು ತನಿಖಾಧಿಕಾರಿಗೆ ನೀಡಲಾಗಿದೆಯೇ?” ಎಂದು ಪ್ರಶ್ನಿಸಿತು. ಅದಕ್ಕೆ ಕೆಪಿಎಸ್ಸಿ ವಕೀಲರು “ಇಲ್ಲ” ಎಂದು ಉತ್ತರಿಸಿದರು.
ಇದೇ ವೇಳೆ ಶಾಂತ ಹೊಸಮನಿ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, “2025ರ ಜುಲೈನಲ್ಲಿ ನೇಮಕಾತಿಗೆ ತಡೆ ನೀಡಲಾಗಿತ್ತು. ಪ್ರಸ್ತುತ ಆಯ್ಕೆ ಪ್ರಕ್ರಿಯೆ ಮುಂದುವರಿಸಬಹುದು, ಆದರೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬಾರದು ಎಂದು ಆದೇಶವಿದೆ” ಎಂದು ವಾದಿಸಿದರು.
ಪ್ರಕರಣದ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 9 ಅಭ್ಯರ್ಥಿಗಳು ಹಾಜರಾಗಿದ್ದರು. ಬೆಳಗಿನ ಅವಧಿಯಲ್ಲಿ 5 ಮಂದಿ ಹಾಗೂ ಸಂಜೆ ಅವಧಿಯಲ್ಲಿ 4 ಅಭ್ಯರ್ಥಿಗಳನ್ನು ಕೆಪಿಎಸ್ಸಿಯ ಮೂವರು ಸದಸ್ಯರು ಸಂದರ್ಶನ ನಡೆಸಿದ್ದರು. ಸಂದರ್ಶನಕ್ಕೆ ಹಾಜರಾದ ಎಲ್ಲಾ 9 ಅಭ್ಯರ್ಥಿಗಳಿಗೆ ನೀಡಲಾದ ಅಂಕಗಳನ್ನು ಪರಿಶೀಲಿಸಬೇಕು ಎಂದು ಸರ್ಕಾರದ ಪರ ವಕೀಲರು ಮನವಿ ಮಾಡಿದರು.
ವಿಚಾರಣೆ ವೇಳೆ 2026ರ ಮೇ 8 ರಂದು ನಡೆದ ಸಂದರ್ಶನದಲ್ಲಿ ಶಾಂತ ಹೊಸಮನಿಗೆ ನೀಡಿದ ಅಂಕಗಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಯಿತು. ಸಂದರ್ಶನಕ್ಕೆ ಹಾಜರಾಗಿದ್ದ ಎಲ್ಲಾ 9 ಅಭ್ಯರ್ಥಿಗಳ ಅಂಕಗಳ ವಿವರವಾದ ಪಟ್ಟಿಯನ್ನು ಸಲ್ಲಿಸುವಂತೆ ಕೆಪಿಎಸ್ಸಿ ನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿತು.
ಈ ಹಂತದಲ್ಲಿ ಶಾಂತ ಹೊಸಮನಿಗೆ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಹೈಕೋರ್ಟ್, “ಆರೋಪಗಳು ಬೇರೆ ಇರಬಹುದು, ಆದರೆ ಈ ಮಹಿಳೆ ಪ್ರತಿಯೊಂದಕ್ಕೂ ಸಂಬಂಧ ಹೊಂದಿದ್ದಾರೆ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟು, ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು.



