No menu items!
10.2 C
Munich
Wednesday, October 7, 2026

ಸೌದಿ ಅರೇಬಿಯಾದ ತೈಲ ಪೈಪ್ ಲೈನ್ ಮೇಲೆಯೇ ದಾಳಿ; ಕಚ್ಚಾ ತೈಲ ದರದಲ್ಲಿ ಭಾರೀ ಏರಿಕೆ!

Must read

ಸೌದಿ ಅರೇಬಿಯಾದ ತೈಲ ಪೈಪ್ ಲೈನ್ ಮೇಲೆಯೇ ದಾಳಿ; ಕಚ್ಚಾ ತೈಲ ದರದಲ್ಲಿ ಭಾರೀ ಏರಿಕೆ!

ರಿಯಾದ್: ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ ತೈಲ ಸಾಗಣೆಗೆ ನೆರವಾಗುತ್ತಿದ್ದ ಸೌದಿ ಅರೇಬಿಯಾದ ಪ್ರಮುಖ ಈಸ್ಟ್-ವೆಸ್ಟ್ ತೈಲ ಪೈಪ್ಲೈನ್ ಮೇಲೆ ಡ್ರೋನ್ ದಾಳಿ ನಡೆದಿದೆ. ದಾಳಿಯ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್ಲೈನ್ ಕಾರ್ಯಾಚರಣೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಮತ್ತಷ್ಟು ಏರಿಕೆ ಕಂಡಿವೆ.
ಡಬ್ಲ್ಯುಟಿಐ ಮತ್ತು ಬ್ರೆಂಟ್ ಕಚ್ಚಾ ತೈಲ ದರಗಳು ಶೇ.3ಕ್ಕೂ ಹೆಚ್ಚು ಏರಿಕೆಯಾಗಿದ್ದು, ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಸುಮಾರು 108 ಡಾಲರ್ಗೆ ತಲುಪಿದೆ.
ಸೌದಿ ವಿದೇಶಾಂಗ ಸಚಿವಾಲಯದ ಪ್ರಕಾರ, ಇರಾಕ್ ಮೂಲದಿಂದ ಬಂದ ಹಲವು ಡ್ರೋನ್ಗಳು ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿರುವ ಈಸ್ಟ್-ವೆಸ್ಟ್ ಪೈಪ್ಲೈನ್ ಮೇಲೆ ದಾಳಿ ನಡೆಸಿವೆ. ದಾಳಿಯಿಂದ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ದಾಳಿಯ ನಂತರ ಸುರಕ್ಷತಾ ಪರಿಶೀಲನೆಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್ಲೈನ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಪ್ರತಿದಿನ ಸುಮಾರು 50ರಿಂದ 70 ಲಕ್ಷ ಬ್ಯಾರೆಲ್ಗಳಷ್ಟು ತೈಲ ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಪೈಪ್ಲೈನ್, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳಲ್ಲಿ ತೈಲ ಸಾಗಿಸುವುದಕ್ಕೆ ಪರ್ಯಾಯ ಮಾರ್ಗವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾಗಿರುವ ತೈಲ ಪೂರೈಕೆ ಕೊರತೆಯನ್ನು ಸರಿದೂಗಿಸುವಲ್ಲಿಯೂ ಈ ಮಾರ್ಗ ಪ್ರಮುಖವಾಗಿತ್ತು.
ಇದೀಗ ಪೈಪ್ಲೈನ್ ಕಾರ್ಯಾಚರಣೆ ಸ್ಥಗಿತಗೊಂಡಿರುವುದು ಈಗಾಗಲೇ ಅಸ್ಥಿರವಾಗಿರುವ ಜಾಗತಿಕ ತೈಲ ಮಾರುಕಟ್ಟೆಗೆ ಮತ್ತಷ್ಟು ಒತ್ತಡ ತಂದಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತೈಲದ ಲಭ್ಯತೆ, ಪರ್ಯಾಯ ಪೂರೈಕೆ ಮೂಲಗಳು ಹಾಗೂ ವೆಚ್ಚದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.
ಈ ಸ್ಥಗಿತ ದೀರ್ಘಕಾಲ ಮುಂದುವರಿದರೆ ಪರ್ಯಾಯ ಕಚ್ಚಾ ತೈಲ ಪೂರೈಕೆ ಪಡೆಯುವುದು ಕಷ್ಟಕರವಾಗುವುದರ ಜೊತೆಗೆ ಅದರ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಸೌದಿ ಪೈಪ್ಲೈನ್ ಮೇಲಿನ ದಾಳಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ.

- Advertisement -spot_img

More articles

- Advertisement -spot_img

Latest article