ಗಣೇಶ ಹಬ್ಬದಂದೇ ಮಗನ ಹೆಸರನ್ನು ರಿವೀಲ್ ಮಾಡಿದ ಡಾಲಿ ಧನಂಜಯ್!
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಗಂಡು ಮಗುವಿನ ತಂದೆ-ತಾಯಿಯಾಗಿರುವ ಈ ಮುದ್ದಾದ ಜೋಡಿ, ಗಣೇಶ ಹಬ್ಬದಂದೇ ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿದ್ದಾರೆ. ಕರ್ನಾಟಕದ ನಕ್ಷೆಯ ಮಧ್ಯೆ ಮಗನ ಹೆಸರು ಮೂಡುವ ರೀತಿಯಲ್ಲಿ ವಿಶೇಷವಾದ ಡಾಲರ್ನ್ನು ಮಾಡಿಸಿ, ಅದರ ಮೂಲಕ ಮಗನ ಹೆಸರನ್ನು ದಂಪತಿ ಬಹಿರಂಗಪಡಿಸಿದ್ದಾರೆ.
‘ಎರೆಯ’ ಎಂಬ ಹೆಸರಿಗೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಈ ಹೆಸರಿಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಇತಿಹಾಸ ಪ್ರಸಿದ್ಧ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ಕೂಡ ‘ಎರೆಯ’ ಎಂದಾಗಿತ್ತು ಎನ್ನಲಾಗುತ್ತದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಡಾಲಿ ದಂಪತಿ, ರಾಜರ ಪರಂಪರೆ ಹಾಗೂ ಶಕ್ತಿಯುತ ಅರ್ಥವನ್ನು ಹೊಂದಿರುವ ಈ ಹೆಸರು ತಮ್ಮ ಪುಟ್ಟ ಬದುಕಿನ ಅಧಿಪತಿಗೆ, ತಮ್ಮ ಹೃದಯದ ರಾಜನಿಗೆ ಸೂಕ್ತವಾಗಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಮತ್ತು ಧನ್ಯತಾ, ಸ್ಯಾಂಡಲ್ವುಡ್ನ ಮುದ್ದಾದ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಮದುವೆಯ ಬಳಿಕ ತಮ್ಮ ವೈಯಕ್ತಿಕ ಜೀವನದ ಹಲವು ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಇತ್ತೀಚೆಗಷ್ಟೇ ಧನಂಜಯ್ ಹಾಗೂ ಧನ್ಯತಾ ದಂಪತಿ ‘ನಮ್ಮ ಪ್ರಪಂಚ ವಿಸ್ತರಿಸುತ್ತಿದೆ’ ಎಂಬ ಸಂದೇಶದೊಂದಿಗೆ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ಪೋಷಕರಾಗುತ್ತಿರುವ ಸಂತಸದ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದರು.
ಇದೀಗ ಗಂಡು ಮಗುವಿಗೆ ‘ಎರೆಯ’ ಎಂಬ ವಿಶೇಷ ಹೆಸರನ್ನು ಇಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಗಣೇಶ ಹಬ್ಬದಂದು ಮಗನ ಹೆಸರನ್ನು ವಿಭಿನ್ನವಾಗಿ ರಿವೀಲ್ ಮಾಡಿರುವ ಡಾಲಿ ದಂಪತಿಯ ಈ ಪೋಸ್ಟ್ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.



