ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಗೆ ಹೊಸ ಚುರುಕು; ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ನೇಮಕ
ಬೆಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಬಿ. ಜಗಲಾಸರ್ ಅವರನ್ನು ನೇಮಕ ಮಾಡಲಾಗಿದೆ. ಎಸ್ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಅವರು ಈ ನೇಮಕಾತಿ ಮಾಡಿದ್ದಾರೆ.
ಪ್ರಕರಣದ ತೀವ್ರತೆ ಹಾಗೂ ಗಂಭೀರತೆಯನ್ನು ಪರಿಗಣಿಸಿ ನಡೆದ ಎಸ್ಐಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೋಕೇಶ್ ಬಿ. ಜಗಲಾಸರ್ ಅವರಿಗೆ ಸಹಾಯಕ ತನಿಖಾಧಿಕಾರಿಯಾಗಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಓರ್ವ ಐಪಿಎಸ್ ಹಾಗೂ ಓರ್ವ ಕೆಎಸ್ಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿಯಲಿದೆ.
ಲೋಕೇಶ್ ಬಿ. ಜಗಲಾಸರ್ ಅವರು ಈ ಹಿಂದೆ ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಸಿಐಡಿಯಲ್ಲಿ ಎಸ್ಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕರಣದ ತನಿಖೆಗೆ ತಾಂತ್ರಿಕವಾಗಿ ಸಮರ್ಥ ಹಾಗೂ ಅನುಭವಿ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ಕೂಡ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕೇಶ್ ಜಗಲಾಸರ್ ಅವರ ನೇಮಕಕ್ಕೆ ಮಹತ್ವ ಬಂದಿದೆ.
ಲೋಕೇಶ್ ಜಗಲಾಸರ್ ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಏಳು ಕೋಟಿ ರೂಪಾಯಿ ದರೋಡೆ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿದ್ದರು. ಆ ಪ್ರಕರಣದಲ್ಲಿ ದರೋಡೆಯಾಗಿದ್ದ ಸಂಪೂರ್ಣ ಹಣವನ್ನು ತನಿಖಾ ತಂಡ ಕೇವಲ ಎರಡು ದಿನಗಳಲ್ಲಿ ವಶಪಡಿಸಿಕೊಂಡಿತ್ತು.
ಸೌಜನ್ಯ ಪ್ರಕರಣದ ತನಿಖೆಗೆ ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಕವಾಗಿರುವ ಹಿನ್ನೆಲೆಯಲ್ಲಿ ತನಿಖೆಯ ಮುಂದಿನ ಹಂತಗಳ ಬಗ್ಗೆ ಕುತೂಹಲ ಮೂಡಿದೆ.



