ಯಾರೂ ಊಹಿಸದ ಪವಾಡವೊಂದು ತಮಿಳುನಾಡು ಚುನಾವಣೆಯಲ್ಲಿ ನಡೆದಿದೆ. ರಾಜಕೀಯದಲ್ಲಿ ಪಳಗಿದ ಡಿಎಂಕೆ ನಾಯಕರನ್ನೇ ವಿಜಯ್ ಮಣ್ಣು ಮುಕ್ಕಿಸಿದ್ದಾರೆ. ದಶಕಗಳಿಂದ ಕರುಣಾನಿಧಿ ಮತ್ತು ಜಯಲಲಿತಾ ಎಂಬ ಇಬ್ಬರು ದೈತ್ಯ ನಾಯಕರ ನೆರಳಿನಲ್ಲೇ ಬೆಳೆದ ಈ ನೆಲದಲ್ಲಿ, ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ಡಿಎಂಕೆಎಂಬ ದ್ರಾವಿಡ ಕೋಟೆಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಮಾತಿತ್ತು.
ಆದರೆ ಕೇವಲ 30 ತಿಂಗಳಿನಲ್ಲೇ ಈ ಮಾತನ್ನು ಸುಳ್ಳಾಗಿಸಿದ ವಿಜಯ್ ಇಡೀ ತಮಿಳುನಾಡಿನ ರಾಜಕೀಯ ಸಮೀಕರಣವೇ ಅದಲುಬದಲು ಮಾಡಿದ್ದಾರೆ. ಈ ಮೂಲಕ ದಶಕಗಳ ಇತಿಹಾಸವನ್ನೊಂದಿರುವ ದ್ರಾವಿಡ ಪಕ್ಷವನ್ನೇ ಸೋಲಿಸಿ ಎಲ್ಲರನ್ನು ನಿಬ್ಬೇರಗಾಗಿಸಿದ್ದಾರೆ. ಬೆಳ್ಳಿತೆರೆಯ ದಳಪತಿ ಈಗ ತಮಿಳುನಾಡಿನ ಚಕ್ರವರ್ತಿಯಾಗಿ ಹೊರ ಹೊಮ್ಮಿದ್ದಾರೆ.
ಇನ್ನು ಸ್ಟ್ಯಾಲಿನ್ ಸಾಮ್ರಾಜ್ಯಕ್ಕೆ ದಳಪತಿ ಕೊಟ್ಟ ಶಾಕ್ ಅಂತಿಂತದ್ದಲ್ಲ! ಹೌದು, ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆಡಳಿತಾರೂಢ ಡಿಎಂಕೆಗೆ ಮರ್ಮಾಘಾತ ನೀಡಿದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ಬಂದಿದೆ.
ಈ ಚುನಾವಣೆಯ ಅತಿದೊಡ್ಡ ಹೈಲೈಟ್ ಅಂದ್ರೆ, ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಅವರೇ ಸೋಲುಂಡಿರುವುದು. ಅಚ್ಚರಿಯ ವಿಷಯ ಅಂದ್ರೆ, ಸ್ಟ್ಯಾಲಿನ್ ಸೋತಿರೋದು ತಮ್ಮದೇ ಭದ್ರಕೋಟೆ ಎನಿಸಿಕೊಂಡಿರೋ ಕೊಳತ್ತೂರು ಕ್ಷೇತ್ರದಲ್ಲಿ. ಇದು ಡಿಎಂಕೆ ಪಾಲಿಗೆ ಅರಗಿಸಿಕೊಳ್ಳಲಾಗದ ಕಟು ಸತ್ಯ.
ಕೊಳತ್ತೂರು ಅಂದ್ರೆ ಅದು ಸ್ಟ್ಯಾಲಿನ್ ಅವರ ಸಾಮ್ರಾಜ್ಯವಿದ್ದಂತೆ. 2011ರಿಂದಲೂ ಈ ಕ್ಷೇತ್ರವನ್ನು ಅವರೇ ಪ್ರತಿನಿಧಿಸುತ್ತಿದ್ದರು. ಕಳೆದ ಬಾರಿ ಬರೋಬ್ಬರಿ 70 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಸ್ಟ್ಯಾಲಿನ್, ಈ ಬಾರಿ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ 8 ರಿಂದ 9 ಸಾವಿರ ಮತಗಳ ಅಂತರದಿಂದ ಹೀನಾಯವಾಗಿ ಸೋತಿದ್ದಾರೆ. ಒಬ್ಬ ಹಾಲಿ ಮುಖ್ಯಮಂತ್ರಿ ತನ್ನದೇ ಕ್ಷೇತ್ರದಲ್ಲಿ ಸೋಲುತ್ತಾರೆ ಅಂದ್ರೆ ವಿಜಯ್ ಅವರ ಟಿವಿಕೆ ಪಕ್ಷ ಎಂತಹ ಗಾಳಿ ಬೀಸಿದೆ ಅನ್ನೋದನ್ನು ನೀವೆ ಊಹಿಸಿ.
ಇಷ್ಟೇ ಅಲ್ಲ, ಸ್ಟ್ಯಾಲಿನ್ ಸಂಪುಟದ 14 ಪ್ರಭಾವಿ ಸಚಿವರು ಕೂಡ ನೆಲಕಚ್ಚಿದ್ದಾರೆ. ಸಿಎಂ ಸ್ಟ್ಯಾಲಿನ್ ಅವರನ್ನು ಸೋಲಿಸಿದ ವಿ.ಎಸ್. ಬಾಬು ಅವರಿಗೆ ಈಗ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಅಸಲಿಗೆ ಬಾಬು ಅವರು ಡಿಎಂಕೆಯ ಹಿರಿಯ ನಾಯಕರಾಗಿದ್ದವರು. ಉತ್ತರ ಚೆನ್ನೈನಲ್ಲಿ ಹಿಡಿತ ಹೊಂದಿದ್ದ ಇವರು ಇತ್ತೀಚೆಗಷ್ಟೇ ವಿಜಯ್ ಸಿದ್ಧಾಂತಕ್ಕೆ ಮಾರುಹೋಗಿ ಟಿವಿಕೆ ಸೇರ್ಪಡೆಯಾಗಿದ್ದರು.
ಇವತ್ತು ತಮ್ಮ ಹಳೆಯ ಗುರುವನ್ನೇ ಮಣ್ಣುಮುಕ್ಕಿಸುವ ಮೂಲಕ ದಳಪತಿ ವಿಜಯ್ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಬಾಬು ಅವರಿಗೆ ಸುಮಾರು 82 ಸಾವಿರ ಮತಗಳು ಬಿದ್ದರೆ, ಸ್ಟ್ಯಾಲಿನ್ 73 ಸಾವಿರ ಮತಗಳಿಗೆ ಸುಸ್ತಾಗಿದ್ದಾರೆ.
ಸಂಜೆ 4 ಗಂಟೆಯ ಹೊತ್ತಿಗೆ ಬಂದ ಟ್ರೆಂಡ್ ಪ್ರಕಾರ, ವಿಜಯ್ ಅವರ ಟಿವಿಕೆ ಪಕ್ಷ ಮ್ಯಾಜಿಕ್ ನಂಬರ್ 118ರ ಹತ್ತಿರ ಸಾಗುತ್ತಿದೆ. 11 ಸ್ಥಾನಗಳಲ್ಲಿ ಈಗಾಗಲೇ ಗೆದ್ದು, 96ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿವಿಕೆ, ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸೋದು ಬಹುತೇಕ ಖಚಿತವಾಗಿದೆ. ಅತ್ತ ಆಡಳಿತಾರೂಢ ಡಿಎಂಕೆ ಕೇವಲ 4 ಸ್ಥಾನಗಳಲ್ಲಿ ಗೆದ್ದು 67 ಕಡೆ ಮುನ್ನಡೆ ಸಾಧಿಸಿ ಭಾರೀ ಹಿನ್ನಡೆ ಅನುಭವಿಸಿದೆ. ಏಪ್ರಿಲ್ 23ರಂದು ನಡೆದ ಒಂದೇ ಹಂತದ ಚುನಾವಣೆ ಇಂದು ತಮಿಳುನಾಡಿನ ರಾಜಕೀಯ ಚಿತ್ರಣವನ್ನೇ ಬದಲಿಸಿದೆ.



