ಇದು ದಪ್ಪ ಚರ್ಮದ ಸರ್ಕಾರ, ಸದನದಲ್ಲೇ ಚಳಿ ಬಿಡಿಸುತ್ತೇವೆ: ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಇದು ದಪ್ಪ ಚರ್ಮದ ಸರ್ಕಾರ. ಈ ಸರ್ಕಾರಕ್ಕೆ ಚಳಿ ಬಿಡಿಸುವ ಹಾಗೂ ಕಿವಿ ಹಿಂಡುವ ಕೆಲಸವನ್ನು ಸದನದಲ್ಲಿ ಮಾಡೇ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಕಳೆದ ವಿಧಾನಸಭೆ ಅಧಿವೇಶನದಲ್ಲಿಯೂ ವಿರೋಧ ಪಕ್ಷದ ಹೋರಾಟದಿಂದ ಸರ್ಕಾರಕ್ಕೆ ತೀವ್ರ ಒತ್ತಡ ಎದುರಾಗಿತ್ತು ಎಂದು ಹೇಳಿದ್ದಾರೆ. ನಮ್ಮ ಹೋರಾಟದಿಂದ ಒಂದು ವಿಕೆಟ್ ಬಿದ್ದಿತ್ತು. ಈ ಬಾರಿಯೂ ವಿರೋಧ ಪಕ್ಷವಾಗಿ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 21ರಿಂದ 23ರವರೆಗೆ ನಡೆಯುತ್ತಿರುವ ವಿಶೇಷ ಅಧಿವೇಶನವನ್ನು ಸರ್ಕಾರ ಬೇಗ ಮುಗಿಸಲು ಮುಂದಾಗಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಬರ ಪರಿಸ್ಥಿತಿ ಕುರಿತು ಸಮಗ್ರ ಚರ್ಚೆ ನಡೆಸಲು ಇನ್ನೂ ಎರಡು ದಿನಗಳನ್ನು ಹೆಚ್ಚುವರಿಯಾಗಿ ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಾಲ್ಕು ತಿಂಗಳ ಹಿಂದೆಯೇ ಎಚ್ಚೆತ್ತುಕೊಳ್ಳಬೇಕಿತ್ತು. ಇದೀಗ ಬರದ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿರುವುದು ‘ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ’ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.
ಬರ ಪರಿಸ್ಥಿತಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಯ ವಿಚಾರವನ್ನೂ ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಚಾಮರಾಜನಗರದಲ್ಲಿ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನೂ ಉಲ್ಲೇಖಿಸಿದ ಅವರು, ರೈತರ ಸಂಕಷ್ಟ, ಬರ ಪರಿಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ಸರ್ಕಾರವನ್ನು ಸದನದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕು ಎಂಬುದು ವಿರೋಧ ಪಕ್ಷದ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಉತ್ತರ ಪಡೆಯಲು ವಿರೋಧ ಪಕ್ಷ ಸಿದ್ಧವಾಗಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.



