ಕರ್ನಾಟಕದಲ್ಲಿ ಮುಂದಿನ 3 ದಿನ ಗುಡುಗು-ಮಿಂಚು ಸಹಿತ ಭಾರೀ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ 23ರಂದು ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಇದೇ ವೇಳೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಸೆಪ್ಟೆಂಬರ್ 23 ಮತ್ತು 24ರಂದು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 24ರಂದು ಕರಾವಳಿ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಸೆಪ್ಟೆಂಬರ್ 22 ಮತ್ತು 25ರಂದು ಕರಾವಳಿ ಭಾಗದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಇಂದಿನಿಂದ ಸೆಪ್ಟೆಂಬರ್ 24ರವರೆಗೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯ ಜೊತೆಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಈ ಭಾಗಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಇಂದು ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆಯಾಗಿದ್ದು, ನಗರದ ಹಲವೆಡೆ ಚಳಿಯ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆ, ಗುಡುಗು ಹಾಗೂ ಬಿರುಗಾಳಿಯ ಮುನ್ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ 26ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕ್ರಮೇಣ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



