No menu items!
21.5 C
Munich
Tuesday, July 21, 2026

ಮಕ್ಕಳು ವಯಸ್ಕರಾದರೂ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ; ಮಗಳ ವೈದ್ಯಕೀಯ ವೆಚ್ಚ ತಂದೆಯೇ ಭರಿಸಬೇಕು ಎಂದ ಹೈಕೋರ್ಟ್

Must read

ಮಕ್ಕಳು ವಯಸ್ಕರಾದರೂ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ; ಮಗಳ ವೈದ್ಯಕೀಯ ವೆಚ್ಚ ತಂದೆಯೇ ಭರಿಸಬೇಕು ಎಂದ ಹೈಕೋರ್ಟ್

ಬೆಂಗಳೂರು: ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕವೂ ಅವರ ಮೂಲಭೂತ ಅಗತ್ಯಗಳು, ಆರೋಗ್ಯ ಹಾಗೂ ಶಿಕ್ಷಣದ ಜವಾಬ್ದಾರಿ ಹೆತ್ತವರಿಂದ ಮುಕ್ತವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ದಂಪತಿ ನಡುವೆ ಕೌಟುಂಬಿಕ ಕಲಹಗಳಿದ್ದರೂ, ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರಾಪ್ತ ವಯಸ್ಸಿನ ಮಗಳ ಶಿಕ್ಷಣ ವೆಚ್ಚವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಂಗಳೂರಿನ 53 ವರ್ಷದ ಉದ್ಯಮಿಯೊಬ್ಬರು ತಮ್ಮ ಮಗಳು ಸ್ನಾತಕೋತ್ತರ (PG) ವೈದ್ಯಕೀಯ ಶಿಕ್ಷಣ ಪಡೆಯಲು ಅಗತ್ಯವಿರುವ ವಾರ್ಷಿಕ ₹16 ಲಕ್ಷ ಶುಲ್ಕವನ್ನು ಪಾವತಿಸುವಂತೆ ಮಂಗಳೂರಿನ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಹೈಕೋರ್ಟ್, ಗೃಹ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 20(1)(d) ಕೇವಲ ಮೂಲಭೂತ ಜೀವನ ನಿರ್ವಹಣೆಗೆ ಮಾತ್ರ ಸೀಮಿತವಲ್ಲ. ಇದು ಮಕ್ಕಳ ಉನ್ನತ ಶಿಕ್ಷಣದ ಆರ್ಥಿಕ ಅಗತ್ಯಗಳನ್ನೂ ಒಳಗೊಂಡಿದೆ ಎಂದು ತಿಳಿಸಿದೆ.

ತಂದೆಯ ಆದಾಯ ತೆರಿಗೆ ರಿಟರ್ನ್ಸ್ ಹಾಗೂ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿದಾಗ, ಅವರು ಸುಮಾರು ₹1.34 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವುದು ಕಂಡುಬಂದಿದೆ. ಹೀಗಾಗಿ ಮಗಳ ಶಿಕ್ಷಣದ ವೆಚ್ಚವನ್ನು ಭರಿಸುವ ಸಾಮರ್ಥ್ಯ ತಂದೆಗೆ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಗಳು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಪಡೆಯಬಹುದಾಗಿದ್ದ ವಾರ್ಷಿಕ ₹75 ಲಕ್ಷ ಶುಲ್ಕದ ಸೀಟಿನ ಬದಲಿಗೆ, ತನ್ನ ಪ್ರತಿಭೆ ಹಾಗೂ ಮೆರಿಟ್ ಆಧಾರದ ಮೇಲೆ ಕಡಿಮೆ ಶುಲ್ಕದ ಸೀಟು ಪಡೆದಿದ್ದಾರೆ. ಹೀಗಾಗಿ ಹೆತ್ತವರ ನಡುವಿನ ವೈಮನಸ್ಸು ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂದು ಹೈಕೋರ್ಟ್ ಹೇಳಿದೆ.

ಉನ್ನತ ಶಿಕ್ಷಣ ಪಡೆಯಲು ಅಗತ್ಯವಾದ ಹಣವನ್ನು ಹೆತ್ತವರಿಂದ ಪಡೆಯುವುದು ಮಗಳ ಕಾನೂನುಬದ್ಧ ಹಕ್ಕಾಗಿದೆ. ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು ಪೋಷಕರ ಕಾನೂನಾತ್ಮಕ ಹಾಗೂ ನೈತಿಕ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರು ಮೂಲದ ಈ ದಂಪತಿ ನಡುವೆ ಕೌಟುಂಬಿಕ ಕಲಹ ಉಂಟಾಗಿದ್ದು, ಇಬ್ಬರೂ ಒಂದೇ ಕಟ್ಟಡದ ಪ್ರತ್ಯೇಕ ಮಹಡಿಗಳಲ್ಲಿ ವಾಸಿಸುತ್ತಿದ್ದಾರೆ.

ಅವರ ಮಗಳು ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿ, ನೀಟ್-ಪಿಜಿ ಪರೀಕ್ಷೆಯಲ್ಲಿ 11,722ನೇ ಆಲ್ ಇಂಡಿಯಾ ರ್ಯಾಂಕ್ ಗಳಿಸಿದ್ದರು. ಬಳಿಕ ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ. (ಚರ್ಮರೋಗ ಶಾಸ್ತ್ರ) ವಿಭಾಗಕ್ಕೆ ಪ್ರವೇಶ ಪಡೆದಿದ್ದರು.

ಆದರೆ, ಮಗಳು ಈಗಾಗಲೇ 18 ವರ್ಷ ಪೂರ್ಣಗೊಳಿಸಿ ಪ್ರಾಪ್ತ ವಯಸ್ಕಳಾಗಿದ್ದಾಳೆ. ಆಕೆ ಸ್ವತಃ ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು ಎಂದು ಹೇಳಿ ತಂದೆ ಶಿಕ್ಷಣ ಶುಲ್ಕ ಪಾವತಿಸಲು ನಿರಾಕರಿಸಿದ್ದರು.

ಇದನ್ನು ಪ್ರಶ್ನಿಸಿ ಮಗಳು ಗೃಹ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 20(d) ಅಡಿಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು ಮಗಳ ಶಿಕ್ಷಣಕ್ಕಾಗಿ ₹16 ಲಕ್ಷ ಪಾವತಿಸುವಂತೆ ತಂದೆಗೆ ಆದೇಶ ನೀಡಿದ್ದವು.

ಈ ಆದೇಶವನ್ನು ಪ್ರಶ್ನಿಸಿ ತಂದೆ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ, ಮಗಳ ಶಿಕ್ಷಣ ವೆಚ್ಚ ಭರಿಸುವಂತೆ ನೀಡಿದ್ದ ಆದೇಶವನ್ನು ಮುಂದುವರಿಸಿದೆ.

- Advertisement -spot_img

More articles

- Advertisement -spot_img

Latest article