No menu items!
32.7 C
Munich
Wednesday, June 24, 2026

ಎಂ.ಬಿ. ಪಾಟೀಲ್ ಹೇಳಿಕೆಗೆ ಆಧಾರ ಇದ್ದರೆ ಸಾಬೀತುಪಡಿಸಲಿ; ಇಲ್ಲದಿದ್ದರೆ ಕ್ಷಮೆ ಕೇಳಲಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹ

Must read

ಎಂ.ಬಿ. ಪಾಟೀಲ್ ಹೇಳಿಕೆಗೆ ಆಧಾರ ಇದ್ದರೆ ಸಾಬೀತುಪಡಿಸಲಿ; ಇಲ್ಲದಿದ್ದರೆ ಕ್ಷಮೆ ಕೇಳಲಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಂಗಳೂರು:
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಆಧಾರವಿಲ್ಲದೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. “ಎಂ.ಬಿ. ಪಾಟೀಲ್ ಅವರನ್ನು ವಿದ್ಯಾವಂತ ರಾಜಕಾರಣಿ ಎಂದು ಭಾವಿಸಿದ್ದೆ. ಆದರೆ ಯಾವ ಮಾಹಿತಿಯ ಆಧಾರದ ಮೇಲೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಟೀಕಿಸಿದರು.
“ನಮ್ಮ ಕುಟುಂಬದ ಬಳಿ 100 ಎಕರೆ ಭೂಮಿ ಇದೆ ಎಂಬ ಆರೋಪವನ್ನು ಎಂ.ಬಿ. ಪಾಟೀಲ್ ಸಾಬೀತುಪಡಿಸಿದರೆ ಅವರಿಗೆ ನಾನು ತಲೆಬಾಗುತ್ತೇನೆ. ಒಂದು ವೇಳೆ ಅದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು” ಎಂದು ನಿಖಿಲ್ ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಪೋಸ್ಟರ್ ಅಭಿಯಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕೆಲವು ಪುಂಡಪೋಕರಿ ಚೇಲಾಗಳು ಈ ರೀತಿಯ ಕೆಲಸ ಮಾಡಿದ್ದಾರೆ. ಇಂತಹ ಪ್ರತಿಯೊಂದು ವಿಚಾರಕ್ಕೂ ಉತ್ತರ ನೀಡಲು ಸಾಧ್ಯವಿಲ್ಲ” ಎಂದು ಹೇಳಿದರು.
ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ನಿಖಿಲ್, “ಇಂದಿನ ‘ಸ್ಟೇಟಸ್ ಮುಖ್ಯಮಂತ್ರಿ’ಗಳು ಕೆಲವರನ್ನು ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಲು ಮುಂದಿಟ್ಟಿದ್ದಾರೆ. ಹೆಚ್ಚು ಟೀಕೆ ಮಾಡುವವರಿಗೆ ಮಂತ್ರಿಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆದ ಬಳಿಕ ಇಂತಹವರು ಮನೆ ಸೇರಿಕೊಳ್ಳುತ್ತಾರೆ” ಎಂದು ಲೇವಡಿ ಮಾಡಿದರು.
ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ‘ನಿಖಿಲ್ ಲೇಔಟ್ ಮಾಡ್ತೀನಿ’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, “ರೈತರಿಗೆ ಬೇಕಾಗಿರುವುದು ನೆಮ್ಮದಿಯ ಜೀವನ ಹಾಗೂ ಸ್ವಾಭಿಮಾನದ ಬದುಕು. ಆದರೆ ಕೆಲವರಿಗೆ ಲೇಔಟ್ ಮಾಡುವುದೇ ಮುಖ್ಯವಾಗಿದೆ” ಎಂದು ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾತನಾಡಿದ ನಿಖಿಲ್, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಟೌನ್ಶಿಪ್ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ವಿಚಾರದ ಸುತ್ತ ಹರಿದಾಡುತ್ತಿರುವ ಹೇಳಿಕೆಗಳನ್ನು ಪ್ರಶ್ನಿಸಿದರು.
“ಒಂದು ವೇಳೆ ಫಲವತ್ತಾದ ಕೃಷಿ ಭೂಮಿಯಲ್ಲಿ ರೈತರಿಗೆ ಅನ್ಯಾಯ ಮಾಡಿ, ಲಕ್ಷಾಂತರ ಗಿಡಮರಗಳನ್ನು ಕಡಿದು ಟೌನ್ಶಿಪ್ ನಿರ್ಮಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿಗಳಿಗೆ ಹೇಳಿದ್ದರೆ ಅವರು ಒಪ್ಪಿಗೆ ನೀಡುತ್ತಿದ್ರಾ?” ಎಂದು ಪ್ರಶ್ನಿಸಿದರು.
ವಿಧಾನಸೌಧದ ಎಸಿ ಕೊಠಡಿಗಳಲ್ಲಿ ಚರ್ಚೆ ನಡೆಸುವುದಕ್ಕಿಂತ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನಲಾಗುತ್ತಿರುವ ಪ್ರದೇಶದಲ್ಲೇ ಬಹಿರಂಗ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ ಅವರು, “ರೈತರ ಮಧ್ಯೆ ಪರ-ವಿರೋಧ ಚರ್ಚೆ ನಡೆಯಲಿ. ಸತ್ಯಾಸತ್ಯತೆ ಜನರ ಮುಂದೆ ಬರಲಿ” ಎಂದರು.

- Advertisement -spot_img

More articles

- Advertisement -spot_img

Latest article