No menu items!
15.3 C
Munich
Thursday, May 7, 2026

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: BJP ಶಾಸಕಿ ರತ್ನ ದೇವನಾಥ್ ಮನೆ ಬಳಿಯೇ ಬಾಂಬ್​​ ಸ್ಫೋಟ-ಐವರಿಗೆ ಗಾಯ

Must read

ಚುನಾವಣೆ ಅಂದ್ರೆ ಅದು ಪ್ರಜಾಪ್ರಭುತ್ವದ ಹಬ್ಬ ಅನ್ನೋದು ಹಳೇ ಮಾತು. ಈಗಿನ ಕಾಲದಲ್ಲಿ ಚುನಾವಣೆ  ಅಂದ್ರೆ  ರಣರಂಗ ಎಂಬಂತಾಗಿದೆ.  ಗೆದ್ದವರು ಅಬ್ಬರಿಸಿದರೆ ಸೋತು ಮಣ್ಣು ಮುಕ್ಕಿದವರು ಹಗೆತನ-ದ್ವೇಷದ ಜ್ವಾಲೆಯಲ್ಲಿ ಬೇಯುತ್ತಾರೆ. ಪ್ರತೀಕಾರಕ್ಕಾಗಿ ಹಾತೊರೆಯುತ್ತಾರೆ.  ಇದಕ್ಕೆ ಕೈಗನ್ನಡಿ ಎಂಬಂತೆ ಚುನಾವಣೆ ಫಲಿತಾಂಶ ಹೊರ ಬಂದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಹೌದು, ಬಂಗಾಳದ ಮಾಜಿ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ನಾಡಿನಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿದೆ. ಅಭಿವೃದ್ಧಿಯ ಚರ್ಚೆಗಳು ಈಗ ಮರೆಯಾಗಿವೆ.  ಉತ್ತರ 24 ಪರಗಣಾಸ್ ಜಿಲ್ಲೆಯ ಪಾನಿಹಾಟಿ ಈಗ ಈ ರಕ್ತಸಿಕ್ತ ರಾಜಕಾರಣದ ಕೇಂದ್ರಬಿಂದುವಾಗಿದೆ. ಬುಧವಾರ ತಡರಾತ್ರಿ  ಬೈಕ್‌ಗಳಲ್ಲಿ ಬಂದ ಅನಾಮಧೇಯ ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತರ ಮೇಲೆ  ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ.

ಈ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ವಾರ್ಡ್ 2ರ ದತ್ತಾ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿವಾಸಿಗಳೊಂದಿಗೆ ಮಾತನಾಡುತ್ತಿದ್ದಾಗ, ಬೈಕ್‌ನಲ್ಲಿ ಬಂದ ಗುಂಪೊಂದು ಬಾಂಬ್‌ಗಳೆಸೆದು ಓಡಿಹೋಗಿದೆ. ಗಾಯಾಳುಗಳನ್ನು ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನು  ಆಘಾತಕಾರಿ ವಿಷಯವೆಂದರೆ, ಬಾಂಬ್ ಸ್ಫೋಟಗೊಂಡಿರುವುದು ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕಿ ರತ್ನ ದೇವನಾಥ್ ಅವರ ನಿವಾಸದ ಕೂಗಳತೆ ದೂರದಲ್ಲಿ. ರತ್ನ ದೇವನಾಥ್ ಕೇವಲ ಒಬ್ಬ ಶಾಸಕಿಯಲ್ಲ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆರ್‌.ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಸಂತ್ರಸ್ತೆಯ ತಾಯಿ. ಮಗಳ ಸಾವಿನ ನ್ಯಾಯಕ್ಕಾಗಿ ಹೋರಾಡಿ ವಿಧಾನಸಭೆ ಪ್ರವೇಶಿಸಿದ ಮಹಿಳೆಯ ಮನೆ ಮುಂದೆಯೇ ಬಾಂಬ್ ಸಿಡಿಯುತ್ತದೆ ಎಂದರೆ, ಅಲ್ಲಿನ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ ಎಂಬ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ. 

ಈ ಬಾಂಬ್ ದಾಳಿಗೂ ಕೆಲವೇ ಗಂಟೆಗಳ ಮೊದಲು ರಾಜ್ಯದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಒಬ್ಬ ಪ್ರಭಾವಿ ನಾಯಕನ ನೆರಳಿನಂತಿದ್ದ ವ್ಯಕ್ತಿಯನ್ನೇ ಸದ್ದಿಲ್ಲದೆ ಮುಗಿಸಿರುವುದು ನೋಡಿದರೆ, ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಹತ್ಯೆ ಎಂಬ ಸಂಶಯ ದಟ್ಟವಾಗುತ್ತಿದೆ. ಕೇವಲ ರಾಜಕೀಯ ವಿರೋಧ ಎಂಬ ಕಾರಣಕ್ಕೆ ಪ್ರಾಣ ತೆಗೆಯುವ ಮಟ್ಟಕ್ಕೆ ಅಲ್ಲಿನ ಪರಿಸ್ಥಿತಿ ತಲುಪಿದೆ. ಚಂದ್ರನಾಥ್ ಹತ್ಯೆಯ ಬಿಸಿ ಆರುವ ಮುನ್ನವೇ ಪಾನಿಹಾಟಿಯಲ್ಲಿ ಬಾಂಬ್ ಸಿಡಿದಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಈ ಬಗ್ಗೆ ಕೆಂಡಾಮಂಡಲವಾಗಿದ್ದು, “ಬಂಗಾಳ ಈಗ ಜಂಗಲ್ ರಾಜ್ಯವಾಗಿ ಬದಲಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ. “ಕಳೆದ 15 ವರ್ಷಗಳಿಂದ ಟಿಎಂಸಿ ಇದೇ ರೀತಿಯ ಪ್ರತೀಕಾರದ ರಾಜಕಾರಣ ಮಾಡುತ್ತಾ ಬಂದಿದೆ, ಜನರ ತೀರ್ಪನ್ನು ಸ್ವೀಕರಿಸಲಾಗದ ಅಧಿಕಾರದಾಹಿಗಳು ರಕ್ತದೋಕುಳಿ ಆಡುತ್ತಿದ್ದಾರೆ” ಎಂಬುದು ವಿರೋಧ ಪಕ್ಷದ ನೇರ ಆರೋಪ. ಈ ಆರೋಪವನ್ನು ಟಿಎಂಸಿ ನಿರಾಕರಿಸಿದೆ. 

ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,  ನಾವು ತನಿಖೆ ಆರಂಭಿಸಿದ್ದು, ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಗುರುತಿಸಲು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ಧಾರೆ.   ಘಟನಾ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. 

- Advertisement -spot_img

More articles

- Advertisement -spot_img

Latest article