No menu items!
3.1 C
Munich
Wednesday, May 13, 2026

IPL 2026 ; ಹೈದ್ರಾಬಾದ್ ದಾಂಡಿಗರನ್ನು ಹೊಡೆದುರುಳಿಸಿದ ಗುಜರಾತ್ ; ಗಿಲ್ ಗ್ಯಾಂಗ್ ಗಲಗಲ

Must read

ಐಪಿಎಲ್ 2026ರ ಕಣದಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಕ್ಷರಶಃ ಅಬ್ಬರಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಪಡೆ ಸನ್ ರೈಸರ್ಸ್ ತಂಡವನ್ನು ಧೂಳೀಪಟ ಮಾಡಿದೆ. ಬರೋಬ್ಬರಿ 82 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿರುವ ಗುಜರಾತ್, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಷ್ಟೇ ಅಲ್ಲದೆ ಪ್ಲೇಆಫ್ ಸ್ಥಾನವನ್ನು ಬಹುತೇಕ ಕನ್ಫರ್ಮ್ ಮಾಡಿಕೊಂಡಿದೆ.

ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಆಯ್ದುಕೊಂಡರು. ಗುಜರಾತ್ ತಂಡದ ಆರಂಭ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ನಾಯಕ ಶುಭ್‌ಮನ್ ಗಿಲ್ (5) ಮತ್ತು ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ (7) ಬೇಗನೇ ಪೆವಿಲಿಯನ್ ಸೇರುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಸಾಯಿ ಸುದರ್ಶನ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 42 ಎಸೆತಗಳಲ್ಲಿ 61 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

ಇನ್ನು ಪಂದ್ಯದ ಅಂತಿಮ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ ಅಬ್ಬರ ಶುರು ಮಾಡಿದರು. ತಮ್ಮ ಮಾಜಿ ತಂಡದ ವಿರುದ್ಧವೇ ಗುಡುಗಿದ ಸುಂದರ್, ಕೇವಲ 33 ಎಸೆತಗಳಲ್ಲಿ ಅರ್ಧಶತಕ (50 ರನ್) ಸಿಡಿಸಿದರು. ಇವರಿಗೆ ನಿಶಾಂತ್ ಸಿಂಧು ಕೂಡ ಸಾಥ್ ನೀಡಿದ್ದರಿಂದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 168 ರನ್ ಎಂಬ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಹೈದರಾಬಾದ್ ಪರ ಪ್ರಫುಲ್ ಹಿಂಗೆ 2 ವಿಕೆಟ್ ಕಿತ್ತು ಗಮನ ಸೆಳೆದರು.

169 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಮೊದಲ ಓವರ್‌ನಲ್ಲೇ ಆಘಾತ ನೀಡಿದರು. ಡೇಂಜರಸ್ ಬ್ಯಾಟರ್ ಟ್ರಾವಿಸ್ ಹೆಡ್ ಶೂನ್ಯಕ್ಕೆ ಔಟ್ ಆಗುತ್ತಿದ್ದಂತೆ ಹೈದರಾಬಾದ್ ಪಾಳಯದಲ್ಲಿ ನಡುಕ ಶುರುವಾಯಿತು. ನಂತರ ಬಂದ ಅಭಿಷೇಕ್ ಶರ್ಮಾ (6) ಮತ್ತು ಇಶಾನ್ ಕಿಶನ್ (11) ಕೂಡ ಕಗಿಸೊ ರಬಾಡಾ ಅವರ ವೇಗಕ್ಕೆ ಬಲಿಯಾದರು. ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡ ಹೈದರಾಬಾದ್ ಚೇತರಿಸಿಕೊಳ್ಳಲೇ ಇಲ್ಲ.

ಗುಜರಾತ್ ಬೌಲರ್‌ಗಳಾದ ರಬಾಡಾ ಮತ್ತು ಜೇಸನ್ ಹೋಲ್ಡರ್ ಬೆಂಕಿಯಂತಹ ಬೌಲಿಂಗ್ ದಾಳಿ ಮಾಡಿದರು. ಸ್ಮರಣ್ ರವಿಚಂದ್ರನ್, ಸಲೀಲ್ ಅರೋರಾ ಮತ್ತು ಸಿಕ್ಸರ್ ಕಿಂಗ್ ಹೆನ್ರಿಕ್ ಕ್ಲಾಸನ್ ಕೂಡ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ಹೈದರಾಬಾದ್ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಕ್ರೀಸ್ ಬಿಡುತ್ತಿದ್ದರೆ, ಗುಜರಾತ್ ಗೆಲುವು ಸುಲಭವಾಗುತ್ತಾ ಹೋಯಿತು. ತಂಡದ ಪರ ನಾಯಕ ಪ್ಯಾಟ್ ಕಮಿನ್ಸ್ ಗಳಿಸಿದ 19 ರನ್ ಸನ್ ರೈಸರ್ಸ್ ತಂಡದ ಗರಿಷ್ಠ ಸ್ಕೋರ್ ಎಂದರೆ ಹೈದರಾಬಾದ್ ಬ್ಯಾಟಿಂಗ್ ಪರಿಸ್ಥಿತಿ ಎಷ್ಟಿತ್ತು ಎಂದು ಊಹಿಸಬಹುದು.

ಪರಿಣಾಮವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 14.5 ಓವರ್‌ಗಳಲ್ಲಿ 86 ರನ್‌ಗಳಿಗೆ ಆಲೌಟ್ ಆಯಿತು. ಇದು ಈ ಸೀಸನ್‌ನಲ್ಲಿ ಹೈದರಾಬಾದ್ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ. ಗುಜರಾತ್ ಪರ ಕಗಿಸೊ ರಬಾಡಾ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಜೇಸನ್ ಹೋಲ್ಡರ್ 3 ಮತ್ತು ಪ್ರಸಿದ್ಧ ಕೃಷ್ಣ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ 16 ಪಾಯಿಂಟ್ಸ್ ಪಡೆದು ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಆರ್ ಸಿಬಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿರುವ ಗಿಲ್ ಪಡೆ, ಪ್ಲೇಆಫ್‌ಗೆ ಹೋಗುವ ಮೊದಲ ತಂಡವಾಗಿ ಹೊರಹೊಮ್ಮಲು ಸಜ್ಜಾಗಿದೆ. ಹೈದರಾಬಾದ್ ತಂಡಕ್ಕೆ ಈ ಸೋಲು ದೊಡ್ಡ ಹೊಡೆತ ನೀಡಿದ್ದು, ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ

- Advertisement -spot_img

More articles

- Advertisement -spot_img

Latest article