No menu items!
3.1 C
Munich
Wednesday, May 13, 2026

ಕನ್ನಡ ಚಿತ್ರರಂಗಕ್ಕೆ ಬೆಳ್ಳಂಬೆಳಗ್ಗೆ ಆಘಾಥ : ಖ್ಯಾತ ನಟ, ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ದಿಲೀಪ್ ರಾಜ್ ಹಠಾತ್ ನಿಧನ

Must read

ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕ ಇಂದು (ಮೇ 13) ಕಣ್ಣೀರಲ್ಲಿ ಮಿಂದೆದ್ದಿದೆ. ದಶಕಗಳ ಕಾಲ ತನ್ನ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಪ್ರತಿಭಾವಂತ ನಟ, ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ಇಡೀ ಕರುನಾಡನ್ನು ದಿಗ್ಭ್ರಮೆಗೊಳಿಸಿದೆ.. ಕೇವಲ ನಟನಾಗಿ ಮಾತ್ರವಲ್ಲದೆ, ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಎಲ್ಲರ ಮನ ಗೆದ್ದಿದ್ದ ದಿಲೀಪ್ ರಾಜ್, 47ರ ಹರೆಯದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಮಾಹಿತಿಗಳ ಪ್ರಕಾರ, ದಿಲೀಪ್ ರಾಜ್ ಅವರಿಗೆ ಮನೆಯಲ್ಲೇ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ‘ಮಿಲನ’ ಖ್ಯಾತಿಯ ಸಾವಿನ ಸುದ್ದಿ ಕೇಳಿ ಕಿರುತೆರೆ ಕಲಾವಿದರು ಮತ್ತು ಅಭಿಮಾನಿಗಳು ಆಘಾತಕ್ಕೀಡಾಗಿದ್ದಾರೆ.

2005ರಲ್ಲಿ ‘ಬಾಯ್‌ಫ್ರೆಂಡ್’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ದಿಲೀಪ್ ರಾಜ್, ನಂತರ ತಿರುಗಿ ನೋಡಲೇ ಇಲ್ಲ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದಲ್ಲಿನ ನೆಗೆಟಿವ್ ಶೇಡ್ ಪಾತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ‘ಲವ್ ಗುರು’, ‘ಗಾನ ಬಜಾನ’, ‘ಯು-ಟರ್ನ್’ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಅವರು, ಇತ್ತೀಚೆಗೆ ತೆರೆಕಂಡ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲೂ ಲಾಯರ್ ಪಾತ್ರದಲ್ಲಿ ಮಿಂಚಿದ್ದರು. ಬೆಳ್ಳಿತೆರೆಯಲ್ಲಿ ಅವರು ಮಾಡದ ಪಾತ್ರಗಳೇ ಇಲ್ಲ ಎನ್ನುವಂತಿತ್ತು ಅವರ ಅಭಿನಯದ ಹರವು.

ಸಿನಿಮಾ ಒಂದು ಕಡೆಯಾದರೆ, ಕಿರುತೆರೆಯಲ್ಲಂತೂ ದಿಲೀಪ್ ರಾಜ್ ಮನೆಮಾತಾಗಿದ್ದರು. ‘ಜನನಿ’, ‘ರಂಗೋಲಿ’, ‘ಮಾಂಗಲ್ಯ’ ಕಾಲದಿಂದ ಹಿಡಿದು ಇತ್ತೀಚಿನ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ‘ಎಜೆ’ (AJ) ಪಾತ್ರದವರೆಗೆ ಅವರು ಕನ್ನಡಿಗರನ್ನು ರಂಜಿಸಿದ್ದರು. ಕೇವಲ ನಟನೆಗೆ ಸೀಮಿತವಾಗದ ದಿಲೀಪ್, ತಮ್ಮ ಪತ್ನಿ ವಿದ್ಯಾರ ಜೊತೆ ಸೇರಿ ‘ಶ್ರೀವಿಧಿ ಪ್ರೊಡಕ್ಷನ್’ ಮೂಲಕ ‘ಪಾರು’, ‘ವಿದ್ಯಾ ವಿನಾಯಕ’, ‘ನಾ ನಿನ್ನ ಬಿಡಲಾರೆ’ ಅಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದರು.

ಅಚ್ಚರಿಯ ವಿಷಯವೆಂದರೆ ದಿಲೀಪ್ ರಾಜ್ ಒಬ್ಬ ಅದ್ಭುತ ಡಬ್ಬಿಂಗ್ ಕಲಾವಿದ ಕೂಡ ಆಗಿದ್ದರು. ‘ಆ ದಿನಗಳು’ ಸಿನಿಮಾದಲ್ಲಿ ನಟ ಚೇತನ್‌ಗೆ ಧ್ವನಿ ನೀಡಿದ್ದು ಇದೇ ದಿಲೀಪ್ ರಾಜ್. ಅವರ ಕಂಚಿನ ಕಂಠಕ್ಕೆ ಫಿದಾ ಆಗದವರಿಲ್ಲ. ಇಷ್ಟು ವಿಧದ ಪ್ರತಿಭೆಗಳನ್ನು ಹೊಂದಿದ್ದ ವ್ಯಕ್ತಿ ಇಷ್ಟು ಚಿಕ್ಕ ವಯಸ್ಸಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ದಿಲೀಪ್ ರಾಜ್ ನಿಧನಕ್ಕೆ ಹಿರಿಯ ನಟ ದೊಡ್ಡಣ್ಣ ಕಂಬನಿ ಮಿಡಿದಿದ್ದಾರೆ. “ದಿಲೀಪ್ ರಾಜ್ ಅವರ ತಂದೆ ಮತ್ತು ನಮ್ಮ ಅಣ್ಣ ಒಟ್ಟಿಗೆ ಓದಿದವರು. ಆತ ನಮ್ಮ ಮನೆಯ ಮಗನಿದ್ದಂತೆ. ಈ ಸುದ್ದಿ ಕೇಳಿ ಹೊಟ್ಟೆ ಉರಿಯುತ್ತಿದೆ, ಏನು ಹೇಳಬೇಕೋ ತಿಳಿಯುತ್ತಿಲ್ಲ” ಎಂದು ಭಾವುಕರಾಗಿ ನುಡಿದಿದ್ದಾರೆ. ದೊಡ್ಡಣ್ಣ ಮಾತ್ರವಲ್ಲದೆ, ಇಡೀ ಚಂದನವನದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಒಬ್ಬ ನಟನಾಗಿ, ನಿರ್ಮಾಪಕನಾಗಿ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಆಗಿ ದಶಕಗಳ ಕಾಲ ಕನ್ನಡ ಕಲೆಗೆ ಸೇವೆ ಸಲ್ಲಿಸಿದ ದಿಲೀಪ್ ರಾಜ್ ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋದ ಪಾತ್ರಗಳು ಮತ್ತು ಧಾರಾವಾಹಿಗಳ ಮೂಲಕ ಅವರು ಎಂದೆಂದಿಗೂ ಕನ್ನಡಿಗರ ನೆನಪಿನಲ್ಲಿ ಜೀವಂತವಾಗಿರುತ್ತಾರೆ. ಆ ವಿಧಿ ಇಷ್ಟು ಬೇಗ ಇಂತಹ ಒಬ್ಬ ಮಾಣಿಕ್ಯವನ್ನು ಕಿತ್ತುಕೊಳ್ಳಬಾರದಿತ್ತು ಎನ್ನುವುದೇ ಎಲ್ಲರ ಒಕ್ಕೊರಲ ಆಕ್ರೋಶ ಮತ್ತು ಬೇಸರ.

- Advertisement -spot_img

More articles

- Advertisement -spot_img

Latest article