ಇಂದಿನ ಟಾಪ್ 10 ಸುದ್ದಿಗಳು..! 23.12.2015

1
67

1. ನಾಲ್ಕು ದಿನ ಬ್ಯಾಂಕ್ ರಜೆ
ಸರಣಿ ಸರ್ಕಾರಿ ರಜೆಗಳಿಂದಾಗಿ ಬ್ಯಾಂಕ್ ಗಳು ಸತತವಾಗಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ. ಡಿಸೆಂಬರ್ 24ರ ಗುರುವಾರ (ನಾಳೆ), ಈದ್ ಮಿಲಾದ್ , ಡಿ. 25ರ ಶುಕ್ರವಾರ ಕ್ರಿಸ್ಮಸ್, ಶನಿವಾರ ನಾಲ್ಕನೇ ಶನಿವಾರದ ಪ್ರಯುಕ್ತ, ಭಾನುವಾರ ಬ್ಯಾಂಕ್ ಗಳು ತೆರೆಯುವುದಿಲ್ಲ. ಬ್ಯಾಂಕ್ ಗಳಿಗೆ ನಾಲ್ಕುದಿನ ರಜೆ ಇರುವುದರಿಂದ ಎಟಿಎಂನಲ್ಲಿ ಹಣದ ಕೊರತೆ ಎದುರಾಗಲೂ ಬಹುದು ಆದ್ದರಿಂದ ಅಗತ್ಯ ಹಣವನ್ನು ಈ ಕೂಡಲೇ ತೆಗೆದಿಟ್ಟು ಕೊಂಡಿರಿ.

2. ರಾಜೀನಾಮೆಗೆ ಒತ್ತಾಯಿಸಿ ಜೇಟ್ಲಿ ಮನೆ ಎದುರೇ ಪ್ರತಿಭಟನೆ
ಡಿಡಿಸಿಎ ಹಗರಣದಲ್ಲಿ ಕೇಳಿಬಂದಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ ಅವರ ಮನೆಯ ಎದುರು ಆಪ್ನ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರೋ ಜೇಟ್ಲಿ ನಿವಾಸದ ಎದುರು ಆಪ್ ಶಾಸಕ ಜಗದೀಶ್ ಸಿಂಗ್ ಮುಂದಾಳತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

3. ಸುಪ್ರೀಂಕೋರ್ಟ್ ಮೆಟ್ಟಿಲೇರಿದ `ಹಿಟ್ ಅಂಡ್ ರನ್’ ಪ್ರಕರಣ
2002ರ ಗುದ್ದೋಡು (ಹಿಟ್ ಅಂಡ್ ರನ್) ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಿರುವ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡಿದೆ ಎಂಬುದು ತಿಳಿದು ಬಂದಿದೆ.

4. ಕೇರಳದ ಗವರ್ನರ್ಗೆ ಪ್ರವೇಶವಿಲ್ಲ ಎಂದ ಏರ್ ಇಂಡಿಯಾ..!

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ, ಕೇರಳದ ರಾಜ್ಯಪಾಲರಾದ ಪಳಸ್ವಾಮಿ ಸದಾಶಿವಂ ತಡವಾಗಿ ಬಂದಿದ್ದಕ್ಕೆ ಇನ್ನೂ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ ಅಂತ ತುಂಬಾ ಹೊತ್ತಿನಿಂದ ಕಾದಿದ್ದ ಏರ್ ಇಂಡಿಯಾ ಪೈಲೆಟ್ ನಿರಾಕರಿಸಿದ್ದರಿಂದ ರಾಜ್ಯಪಾಲರ ಪ್ರಯಾಣ ರದ್ದಾಗಿದೆ.
ಕೊಚ್ಚಿಯಿಂದ ತಿರುವನಂತಪುರಂಗೆ ಹೋಗುವ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗುವಾಗ ಆಗಮಿಸಿದ್ದ ಗರ್ವನರ್ ಅವರಿಗೆ ಒಳಪ್ರವೇಶವನ್ನು ಅಧಿಕಾರಿಗಳು ನಿರಾಕರಿಸಿದರು. ಏರ್ ಇಂಡಿಯಾ ವಿಮಾನ ರಾತ್ರಿ 9.20ಕ್ಕೆ ಟೇಕ್ ಆಫ್ ಆಗ್ಬೇಕಿತ್ತು. ಆದರೆ 11.40ಕ್ಕೆ ವಿಮಾನ ಟೇಕ್ ಆಫ್ ಆಗಿತ್ತೆಂದು ತಿಳಿದು ಬಂದಿದೆ. 11.28ಕ್ಕೆ ಟರ್ಮಿನಲ್ಗೆ ರಾಜ್ಯಪಾಲರು ಬರುವ ಮೊದಲೇ ವಿಮಾನ ಟೇಕ್ಆಫ್ ಆಗಿತ್ತೆಂದು ಬಲ್ಲ ಮೂಲಗಳು ತಿಳಿಸಿವೆ.

5. ಮೋದಿ ಹೆಸರಿಡಿದು ಘೋಷಣೆ ಕೂಗದಂತೆ ಸೋನಿಯಾ ಆಜ್ಞೆ..!

ಪ್ರಧಾನಮಂತ್ರಿ ಮೋದಿಯವರು ಸಂಸತ್ತಲ್ಲಿರುವಾಗ ಪ್ರತಿಭಟನೆಯ ನೆಪದಲ್ಲಿ ಅವರ ಹೆಸರನ್ನಿಡಿದು ಘೋಷಣೆ ಕೂಗದಿರಿ ಎಂದು ತಮ್ಮ ಪಕ್ಷೀಯರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಜ್ಞೆ ಮಾಡಿದ್ದಾರೆಂಬ ಅಚ್ಚರಿ ಸಂಗತಿಯೊಂದು ವರದಿಯಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ತಮ್ಮ ಪಕ್ಷದವರಿಗೆ ತಾಕೀತು ಮಾಡಿದ ನಂತರ ಸಂಸತ್ತಲ್ಲಿ ಕಾಂಗ್ರೆಸ್ ಸದಸ್ಯರು ಮೋದಿ ಹೆಸರನ್ನು ಸೇರಿಸಿ ಘೋಷಣೆ ಕೂಗುವುದನ್ನು ನಿಲ್ಲಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಕಾಂಗ್ರೆಸ್ ಸಂಸದ ರಂಜನ್ ಚೌಧರಿ ಸದನದ ಬಾವಿಯನ್ನು ಪ್ರವೇಶಿಸಿ ಮೋದಿ ಹೆಸರನ್ನು ಕೂಗುತ್ತಾ ಡಿಡಿಸಿಎ ಹಗರಣ ಸೇರಿದಂತೆ ಬೇರೆ ವಿಷಯಗಳ ವಿರುದ್ಧ ಘೋಷಣೆ ಕೂಗಿದರು. ಇದನ್ನೆಲ್ಲಾ ನೋಡುತ್ತಾ ಕುಳಿತಿದ್ದ ಸೋನಿಯಾ ಗಾಂಧಿ `ಮೋದಿ ಸಂಸತ್ತಲ್ಲಿರುವಾಗ ಅವರ ಹೆಸರು ಹಿಡಿದು ಘೋಷಣೆ ಕೂಗ ಬಾರದು, ವಿಷಯ ಸಂಬಂಧಿತವಾಗಿ ಪ್ರತಿಭಟಿಸಬೇಕೆಂದು ಹೇಳಿದರು. ಆನಂತರ ಮೋದಿ ಹೆಸರು ಹಿಡಿದು ಕೂಗುವುದನ್ನು ಕಾಂಗ್ರೆಸಿಗರು ನಿಲ್ಲಿಸಿದರು.

6. ಹೈಕೋಟರ್್ ನಿವೃತ್ತ ನ್ಯಾಯಮೂರ್ತಿ ವಿಎಸ್ ಮಳೀಮಠ ನಿಧನ

ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ವಿ ಎಸ್ ಮಳೀಮಠ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ನಾಳೆ ಬೆಳಗ್ಗೆ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

7. ದಾವೂದ್ ಕಾರನ್ನು ಸುಟ್ಟು ಹಾಕಿದ ಹಿಂದೂ ಮಹಾಸಭಾ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾರನ್ನು ಹರಾಜು ಮೂಲಕ ಖರೀದಿಸಿದ್ದ ಹಿಂದೂ ಮಹಾಸಭಾ ಆ ಕಾರನ್ನು ಸುಟ್ಟುಹಾಕಿದೆ. ಗಾಜಿಯಾಬಾದ್ ನ ಇಂದರಾಪುರದಲ್ಲಿ ಸಾರ್ವಜನಿಕವಾಗಿ ಕಾರನ್ನು ಸುಟ್ಟಿರುವುದಾಗಿ ಸ್ವಾಮಿ ಚಕ್ರಪಾಣಿ ತಿಳಿಸಿದ್ದಾರೆ. ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು ದೇಶದಲ್ಲಿ ನಡೆಸಿದ ಭಯೋತ್ಪಾದನಾ ಕೃತ್ಯಗಳಿಗೆ ಅಂತ್ಯಸಂಸ್ಕಾರ ಮಾಡುವ ಸಂಕೇತವಾಗಿ ಈ ಕಾರನ್ನು ಸುಡಲಾಗಿದೆ ಎಂದು ಅವರು ತಿಳಿಸಿದರು.

8. ಸ್ವಚ್ಛ ಭಾರತಕ್ಕಾಗಿ 329 ಕೋಟಿ ರೂಪಾಯಿ ಸಂಗ್ರಹ

ಸ್ವಚ್ಛ ಭಾರತ ಸೆಸ್ ಆರಂಭಿಸಿದ ಒಂದು ತಿಂಗಳಿನಲ್ಲಿ 329 ಕೋಟಿ ರೂಪಾಯಿಯನ್ನು ಸಂಗ್ರಹಿಸಿರುವುದಾಗಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ರಾಜ್ಯಸಭೆಗೆ ತಿಳಿಸಿದ್ದಾರೆ. ನವೆಂಬರ್ 15ರಿಂದ ಕೇಂದ್ರ ಸರ್ಕಾರ ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಶೇಕಡಾ 0.5ರಷ್ಟು ಸೆಸ್ ಜಾರಿಗೆ ತಂದಿದೆ. ಅಲ್ಲದೇ ನವೆಂಬರ್ ನಿಂದ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ 3,750 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

9. ನಟ ದರ್ಶನ್ ತಾಯಿ ವಿರುದ್ದ ಎಫ್ ಐಆರ್

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ದರ್ಶನ್ ರ ತಾಯಿ ಮೀನಾ ತೂಗುದೀಪ್ ಶ್ರೀನಿವಾಸ್ ವಿರುದ್ದ ಕಳ್ಳತನದ ಪ್ರಕರಣ ದಾಖಲಾಗಿದೆ. ಮನೆಯ ಹೆಂಚು ಮತ್ತು ಮರದ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮೀನಾ ಸಹೋದರಿಯರಾದ ಪಾರ್ವತಿ ರವಿಕುಮಾರ್ ಮತ್ತು ದಮಯಂತಿ ಮಕರಂದನಾಯ್ಡು ವಿರುದ್ದ ಚಾಮರಾಜನಾಯ್ಡುರವರು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.

10. ಶತ ಕೋಟಿ ಗಡಿ ದಾಟಿದ ಭಾಜೀರಾವ್

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಭಾಜೀರಾವ್ ಮಸ್ತಾನಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಐತಿಹಾಸಿಕ ಡ್ರಾಮಾ 100 ಕೋಟಿ ಕ್ಲಬ್ ಸೇರಿದ್ದು, ರಣಬೀರ್, ದೀಪಿಕಾ, ಪ್ರಿಯಾಂಕಾ ಪಾತ್ರಗಳಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವೆಂದರೆ ಸೋಮವಾರದ ಗಳಿಕೆಯಲ್ಲಿ ಭಾಜೀರಾವ್ ಚಿತ್ರ ಶಾರುಖ್ ಖಾನ್ ನಟನೆಯ ದಿಲ್ವಾಲೆಯನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ.

1 COMMENT

LEAVE A REPLY

Please enter your comment!
Please enter your name here