No menu items!
15 C
Munich
Saturday, June 13, 2026

ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ KSRTC ಖಡಕ್ ಎಚ್ಚರಿಕೆ

Must read

ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ KSRTC ಖಡಕ್ ಎಚ್ಚರಿಕೆ

ಬೆಂಗಳೂರು: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಬುಧವಾರ ಯಾವುದೇ ನೌಕರರು ಮುಷ್ಕರದಲ್ಲಿ ಭಾಗವಹಿಸಬಾರದು ಹಾಗೂ ಮುಷ್ಕರಕ್ಕೆ ಬೆಂಬಲ ಸೂಚಿಸಬಾರದು ಎಂದು ಸೂಚನೆ ನೀಡಲಾಗಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷಾ ಈ ಕುರಿತು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ಮುಷ್ಕರದ ದಿನ ಕೆಲಸಕ್ಕೆ ಗೈರಾಗುವ ಸಿಬ್ಬಂದಿಗೆ ‘ನೋ ವರ್ಕ್ ನೋ ಪೇ’ ನಿಯಮ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಾರಿಗೆ ನೌಕರರ ಮುಷ್ಕರದಿಂದ ಮೇ 20ರಂದು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಯಾವುದೇ ಸಿಬ್ಬಂದಿಗೆ ರಜೆ ಮಂಜೂರು ಮಾಡಬಾರದು. ಅಗತ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನೂ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೀಡಿರುವ ಮುಷ್ಕರ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯ ಕಾರ್ಮಿಕ ಆಯುಕ್ತರ ಮುಂದೆ ರಾಜಿ ಸಂಧಾನ ಹಂತದಲ್ಲಿದೆ. ಕೈಗಾರಿಕಾ ವಿವಾದಗಳ ಕಾಯಿದೆ-1947 ಮತ್ತು ಸಂಬಂಧಿತ ನಿಯಮಗಳ ಪ್ರಕಾರ ‘ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ’ಗಳ ನೌಕರರು ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಮುಷ್ಕರ ನಡೆಸುವಂತಿಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆ ನಿಗಮದ ನೌಕರರು ಯಾವುದೇ ಕಾರಣಕ್ಕೂ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು. ತಮ್ಮ ದೈನಂದಿನ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಿ ಸಾರ್ವಜನಿಕರ ವಿಶ್ವಾಸ ಉಳಿಸಬೇಕು ಎಂದು ಮನವಿ ಮಾಡಲಾಗಿದೆ.

ವಿಶೇಷ ಸೂಚನೆಯಡಿ ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

- Advertisement -spot_img

More articles

- Advertisement -spot_img

Latest article