ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಹರಿವು: ನದಿ ದಡಕ್ಕೆ ತೆರಳದಂತೆ ಭಕ್ತರಿಗೆ ಶ್ರೀಮಠದಿಂದ ಸೂಚನೆ
ರಾಯಚೂರು: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗಾಗಿ ಶ್ರೀಮಠದ ಆಡಳಿತ ಮಂಡಳಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನದಿಯ ದಡದ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭಕ್ತರು ನದಿಗೆ ಇಳಿಯದಂತೆ ಹಾಗೂ ದಡದ ಸಮೀಪ ತೆರಳದಂತೆ ಸೂಚನೆ ನೀಡಲಾಗುತ್ತಿದೆ.

ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಶ್ರೀಮಠದ ಆಡಳಿತ ಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ನದಿಯತ್ತ ತೆರಳುವ ಭಕ್ತರ ಮೇಲೆ ನಿಗಾ ಇಡಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿಯ ದಡಕ್ಕೆ ಹತ್ತಿರ ಹೋಗುವುದು ಅಪಾಯಕಾರಿಯಾಗಬಹುದು. ಹೀಗಾಗಿ ಭಕ್ತರು ಸುರಕ್ಷತಾ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.
ತುಂಗಭದ್ರಾ ನದಿಯಲ್ಲಿನ ನೀರಿನ ಹರಿವಿನ ಕುರಿತು ಭಕ್ತರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲು ಮೈಕ್ರೊಫೋನ್ ಮೂಲಕ ನಿರಂತರವಾಗಿ ಘೋಷಣೆ ಮಾಡಲಾಗುತ್ತಿದೆ. ನದಿ ಬಳಿ ಅನಗತ್ಯವಾಗಿ ತೆರಳದಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಭಕ್ತರಿಗೆ ಸೂಚಿಸಲಾಗುತ್ತಿದೆ.
ಇದೇ ವೇಳೆ ಅನಂತ ಚತುರ್ದಶಿಯ ಶುಭ ಸಂದರ್ಭದಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಮೂಲ ರಾಮದೇವರ ಪೂಜೆಯ ವೇಳೆ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಅನಂತ ಚತುರ್ದಶಿ ವ್ರತವನ್ನು ಆಚರಿಸಿದರು.
ಶ್ರೀಮಠಕ್ಕೆ ಆಗಮಿಸುವ ಭಕ್ತರು ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ಮಂಡಳಿ ನೀಡಿರುವ ಸುರಕ್ಷತಾ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.



