No menu items!
3.9 C
Munich
Wednesday, September 23, 2026

ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹಕ್ಕೆ 160 ಮಂದಿ ಬಲಿ: 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ, 500 ವಿದೇಶಿಗರ ಸಂಪರ್ಕ ಕಡಿತ

Must read

ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹಕ್ಕೆ 160 ಮಂದಿ ಬಲಿ: 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ, 500 ವಿದೇಶಿಗರ ಸಂಪರ್ಕ ಕಡಿತ

ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ತೀವ್ರತೆಯನ್ನು ಅಲ್ಲಿನ ವಿದೇಶಾಂಗ ಸಚಿವ ಶಿಶಿರ್ ಖನಾಲ್ ವಿವರಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ನಗರಗಳೇ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅವರು ಹೇಳಿದ್ದಾರೆ. ರಸುವಾ ಪ್ರದೇಶದಲ್ಲಿ ಸಂಭವಿಸಿದ ಈ ದುರಂತದಲ್ಲಿ 160 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಠ್ಮಂಡುವಿನಲ್ಲಿ ನಡೆದ ಎನ್ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ಶಿಶಿರ್ ಖನಾಲ್, ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ. ದುರಂತದ ಸಂಪೂರ್ಣ ಪ್ರಮಾಣವನ್ನು ಅಂದಾಜಿಸಲು ಸರ್ಕಾರ ಇನ್ನೂ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರವಾಹದಲ್ಲಿ ನಾಪತ್ತೆಯಾಗಿರುವವರಲ್ಲಿ ಮಾನಸ ಸರೋವರ ಯಾತ್ರಿಕರ ಸಂಖ್ಯೆಯೂ ಹೆಚ್ಚಿದೆ. ಕನಿಷ್ಠ 300 ಭಾರತೀಯರು ನಾಪತ್ತೆಯಾಗಿದ್ದು, ಅವರೊಂದಿಗೆ ಸಂಪರ್ಕ ಸಾಧಿಸಲು ನೇಪಾಳ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಭಾರತೀಯರು ಸೇರಿದಂತೆ ಹಲವು ದೇಶಗಳ ಯಾತ್ರಿಕರು ಮಾನಸ ಸರೋವರಕ್ಕೆ ತೆರಳಲು ಪ್ರವಾಹ ಪೀಡಿತ ಮಾರ್ಗವನ್ನು ಬಳಸುತ್ತಾರೆ. ಒಟ್ಟಾರೆಯಾಗಿ ಸುಮಾರು 500 ವಿದೇಶಿ ಪ್ರಜೆಗಳು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಶಿಶಿರ್ ಖನಾಲ್ ತಿಳಿಸಿದ್ದಾರೆ.
ನೇಪಾಳಿ ನಾಗರಿಕರ ಸುರಕ್ಷತೆಯಷ್ಟೇ ವಿದೇಶಿ ಪ್ರಜೆಗಳ ಸುರಕ್ಷತೆಗೂ ಸರ್ಕಾರ ಆದ್ಯತೆ ನೀಡಿದೆ. ನಾಪತ್ತೆಯಾಗಿರುವ ವಿದೇಶಿ ಪ್ರಜೆಗಳ ಕುರಿತು ಸಂಬಂಧಪಟ್ಟ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೇಪಾಳವನ್ನು ತಲ್ಲಣಗೊಳಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಇದೂ ಒಂದಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ. ಸದ್ಯ ಸರ್ಕಾರದ ಸಂಪೂರ್ಣ ಗಮನ ರಕ್ಷಣಾ ಕಾರ್ಯಾಚರಣೆ ಹಾಗೂ ತಕ್ಷಣದ ಪರಿಹಾರ ಕ್ರಮಗಳ ಮೇಲಿದೆ ಎಂದು ತಿಳಿಸಿದ್ದಾರೆ.
ದುರಂತದ ಬಳಿಕ ತಕ್ಷಣವೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿರುವ ಭಾರತ ಸರ್ಕಾರಕ್ಕೆ ಶಿಶಿರ್ ಖನಾಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ನೇಪಾಳಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಸಂಕಷ್ಟದ ಸಂದರ್ಭದಲ್ಲಿ ಭಾರತ ನೀಡಿರುವ ನೆರವನ್ನು ನೇಪಾಳ ಸರ್ಕಾರ ಸ್ವಾಗತಿಸಿದೆ ಎಂದು ಅವರು ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article