SIR ಪರಿಷ್ಕರಣೆಯಲ್ಲಿ ಎಡವಟ್ಟು; ಯುವತಿಯ ಬದಲಿಗೆ ವ್ಯಕ್ತಿಯ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ, ಚುನಾವಣಾ ಆಯೋಗಕ್ಕೆ ನೋಟಿಸ್!
ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ಎಪಿಕ್ ಸಂಖ್ಯೆಯ ಮುಂದೆ ಅಪರಿಚಿತ ವ್ಯಕ್ತಿಯ ಹೆಸರು ನಮೂದಿಸಿರುವುದನ್ನು ಪ್ರಶ್ನಿಸಿ ಯುವತಿಯೊಬ್ಬರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಚುನಾವಣಾ ಆಯೋಗ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ಜೆ.ಪಿ. ನಗರದ ಪುಟ್ಟೇನಹಳ್ಳಿ ನಿವಾಸಿ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರಾದ ಎಸ್. ಮೈಥಿಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ನಡೆಸಿತು. ವಿಚಾರಣೆ ಬಳಿಕ ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ (ERO), ಸ್ಥಳೀಯ ಮತಗಟ್ಟೆ ಅಧಿಕಾರಿ (BLO) ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಲಾಗಿದೆ.
ಎಪಿಕ್ ಸಂಖ್ಯೆಯೇ ಒಂದೇ, ಹೆಸರು ಮಾತ್ರ ಬದಲು!
ಅರ್ಜಿದಾರರಾದ ಎಸ್. ಮೈಥಿಲಿ ಅವರು 2015ರಿಂದ ಎಪಿಕ್ ಕಾರ್ಡ್ (UHN6707236) ಹೊಂದಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 92ರ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 1099ರಲ್ಲಿ ಅವರ ಹೆಸರು ದಾಖಲಾಗಿತ್ತು. ಅಲ್ಲದೆ, 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲೂ ಅವರು ಮತದಾನ ಮಾಡಿದ್ದರು.
ಆದರೆ 2025ರಲ್ಲಿ ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಮೈಥಿಲಿ ಅವರ ಹೆಸರಿನ ಬದಲಿಗೆ ಸೈಯದ್ ಏಜಾಜ್ ಅಹ್ಮದ್ ಎಂಬ ಅಪರಿಚಿತ ವ್ಯಕ್ತಿಯ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇನ್ನೂ ಅಚ್ಚರಿ ಮೂಡಿಸಿರುವ ವಿಚಾರವೆಂದರೆ, ಸೈಯದ್ ಏಜಾಜ್ ಅಹ್ಮದ್ ಹೆಸರಿನ ಮುಂದೆ ನಮೂದಿಸಿರುವ ಎಪಿಕ್ ಸಂಖ್ಯೆ ಮೈಥಿಲಿ ಅವರದ್ದೇ ಆಗಿದೆ. ತಂದೆಯ ಹೆಸರು ಎಸ್.ಎನ್. ಶ್ರೀನಿವಾಸಮೂರ್ತಿ, ಲಿಂಗ ಹಾಗೂ ವಯಸ್ಸಿನ ವಿವರಗಳೂ ಮೈಥಿಲಿ ಅವರಿಗೆ ಸಂಬಂಧಿಸಿದ್ದೇ ಆಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ಕ್ರಮವಿಲ್ಲ
ಈ ವಿಚಾರ ತಮ್ಮ ಗಮನಕ್ಕೆ ಬಂದ ಕೂಡಲೇ ಮೈಥಿಲಿ ಅವರು ನಮೂನೆ-8 ಸಲ್ಲಿಸಿ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೆ, ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ಹಾಗೂ ಮನವಿ ಸಲ್ಲಿಸಿದ್ದರು.
ಆದರೆ, ತಮ್ಮ ಮನವಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೈಥಿಲಿ ಆರೋಪಿಸಿದ್ದಾರೆ. ಬದಲಿಗೆ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ASD (Absent, Shifted, Duplicate) ಪಟ್ಟಿಯಲ್ಲಿ ‘ಶಾಶ್ವತ ಸ್ಥಳಾಂತರ’ ಎಂದು ವರ್ಗೀಕರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ತಾವು ಬೆಂಗಳೂರಿನಲ್ಲೇ ವಾಸವಾಗಿದ್ದು, ಈ ರೀತಿಯ ವರ್ಗೀಕರಣ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಮೈಥಿಲಿ, ತಮ್ಮ ಮತದಾರರ ಗುರುತಿನ ವಿವರಗಳನ್ನು ಸರಿಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದೀಗ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 17ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.



