SIR ವಿರುದ್ಧದ ಹೋರಾಟಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಜಂತರ್ ಮಂತರ್ ಪ್ರವೇಶಿಸಿದ್ದಕ್ಕೆ ಇಬ್ಬರು ನಾಯಕರು ಜೈಲಿಗೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಂದ್ರೆ SIR ವಿರುದ್ಧ ನಡೆಯುತ್ತಿರುವ ಹೋರಾಟ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಜಂತರ್ ಮಂತರ್ ಪ್ರವೇಶಿಸಿ ಶಾಂತಿ ಬಾಂಡ್ ಷರತ್ತು ಉಲ್ಲಂಘಿಸಿದ ಆರೋಪದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಇಬ್ಬರು ಮುಖಂಡರನ್ನು ಐದು ದಿನಗಳ ಕಾಲ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಹೌದು.. ಸಿಜೆಪಿ ಮುಖಂಡರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೊಬ್ಬ ಮುಖಂಡ ಅಜಿಂಕ್ಯ ಶಿಂಧೆ ಅಗತ್ಯ ಶಾಂತಿ ಬಾಂಡ್ ಪ್ರಕ್ರಿಯೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದಾರೆ.
ಅಷ್ಟಕ್ಕೂ ಈ ನಾಯಕರನ್ನು ಜೈಲಿಗೆ ಕಳುಹಿಸಿದ್ದೇಕೆ? ಜಂತರ್ ಮಂತರ್ನಲ್ಲಿ ನಡೆದಿದ್ದೇನು? ಅನ್ನೋದನ್ನು ನೋಡೋದಾದ್ರೆ..
ಕಳೆದ ಶನಿವಾರ SIR ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪವನ್ನು ವಿರೋಧಿಸಿ ಸಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಶಕ್ಕೆ ಪಡೆಯಲಾಗಿದ್ದ ಮುಖಂಡರಿಂದ ಮುಂದಿನ ಒಂದು ವರ್ಷದವರೆಗೆ ಶಾಂತಿ ಕಾಪಾಡುವುದಾಗಿ ಬಾಂಡ್ ಪಡೆಯಲಾಗಿತ್ತು.
ಆದರೆ, ಬಾಂಡ್ಗೆ ಸಹಿ ಹಾಕಿದ ಬಳಿಕವೂ ನಿರ್ಬಂಧಿತ ಜಂತರ್ ಮಂತರ್ ಪ್ರದೇಶಕ್ಕೆ ಪ್ರವೇಶಿಸಿದ ಆರೋಪ ಇವರ ವಿರುದ್ಧ ಕೇಳಿಬಂದಿದೆ. ಅಕ್ರಮ ಪ್ರವೇಶ, ನಿಷೇಧಾಜ್ಞೆ ಉಲ್ಲಂಘನೆ, ಶಾಂತಿ ಬಾಂಡ್ ಷರತ್ತು ಉಲ್ಲಂಘನೆ ಹಾಗೂ ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇನ್ನು ಬುಧವಾರ ಮೂವರನ್ನೂ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ಬಳಿಕ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮತ್ತೊಂದೆಡೆ, ಪೊಲೀಸರ ಕ್ರಮದ ವಿರುದ್ಧ ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಮುಖಂಡರನ್ನು ಮುಂಜಾನೆ ಮೂರು ಗಂಟೆಗೆ ಖಾಸಗಿ ವ್ಯಾನ್ನಲ್ಲಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ತಡರಾತ್ರಿಯವರೆಗೂ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಇದೆಲ್ಲದರ ನಡುವೆ ದೆಹಲಿಯಲ್ಲಿ ಪ್ರತಿಭಟನಾ ಸ್ಥಳಗಳ ಬದಲಾವಣೆಯೂ ವಿವಾದಕ್ಕೆ ಕಾರಣವಾಗಿದೆ. ಅಕ್ಟೋಬರ್ 11ರಂದು ಹೊರಡಿಸಲಾದ ಆದೇಶದ ಪ್ರಕಾರ ಜಂತರ್ ಮಂತರ್ ಬದಲಿಗೆ ರಾಮಲೀಲಾ ಮೈದಾನ, ಬುರಾರಿ ಗ್ರೌಂಡ್ ಹಾಗೂ ಸಿಬಿಡಿ ಗ್ರೌಂಡ್ಗಳನ್ನು ಪ್ರತಿಭಟನೆಗಾಗಿ ನಿಗದಿಪಡಿಸಲಾಗಿದೆ.
ಈ ನಿರ್ಧಾರಕ್ಕೆ ಸಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರು ಮುಖಂಡರ ಬಂಧನದ ಬೆನ್ನಲ್ಲೇ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮಹತ್ವದ ಸಭೆ ಕರೆದಿದೆ.



