ಜಿಬಿಎ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿ ಪ್ರಕರಣ; ತಲೆಮರೆಸಿಕೊಂಡಿದ್ದ ಸಂಘಟನೆ ಮುಖಂಡ ಪೊಲೀಸರ ಬಲೆಗೆ
ಬೆಂಗಳೂರು: ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಜಿಬಿಎ ವತಿಯಿಂದ ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ನಮ್ಮ ಕರ್ನಾಟಕ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ನೇತೃತ್ವದಲ್ಲಿ ಕೆಲವರು ಸ್ಥಳಕ್ಕೆ ಆಗಮಿಸಿ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು.
ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಬಸವರಾಜ್ ಪಡುಕೋಟೆ, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದರು. “ಫುಟ್ಪಾತ್ ತೆರವು ವಿಚಾರಕ್ಕೆ ನಾವು ಗಲಾಟೆ ಮಾಡಿಲ್ಲ. ಸ್ಥಳದಲ್ಲಿ ನಮ್ಮ ಸಂಘಟನೆಯಿಂದ ಕನ್ನಡ ಧ್ವಜ ಹಾರಿಸಲಾಗಿತ್ತು ಹಾಗೂ ಗಣೇಶ ದೇವಸ್ಥಾನವಿತ್ತು. ಅಧಿಕಾರಿಗಳು ಅವುಗಳನ್ನು ತೆಗೆದುಹಾಕುವಂತೆ ಉದ್ಧಟತನದಿಂದ ಮಾತನಾಡಿದ್ದರಿಂದ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ನಾನು ಸ್ವಯಂಪ್ರೇರಿತವಾಗಿ ಪೊಲೀಸರಿಗೆ ಶರಣಾಗುತ್ತೇನೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು.
ಆದರೆ, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಸವರಾಜ್ ಪಡುಕೋಟೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಮಂಗಳವಾರ ಬೆಳಗ್ಗೆ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಸ್ಥಳೀಯ ಸಂಘಟನೆಗಳ ಸದಸ್ಯರು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು.
ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪಿಗಳು ಜಿಬಿಎ ಇಂಜಿನಿಯರ್ಗಳು ಹಾಗೂ ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಬಳಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಜಿಬಿಎ ಅಧಿಕಾರಿಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಿರಣ್ (34), ಬಸವರಾಜ್ (28), ರಂಜಿತ್ (19), ರಂಗಸ್ವಾಮಿ (49), ಮುಜಾಹಿದಾ ಅಹಮದ್ (39), ಕೊಟ್ರೇಶ್ (26), ಪರಶುರಾಮ್ (27), ರಘು (28), ಪಾರ್ಥೀಬನ್ (23) ಹಾಗೂ ಭರತ್ (24) ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ.



