No menu items!
26.2 C
Munich
Wednesday, August 12, 2026

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಳಂಬ; ಹೈಕಮಾಂಡ್ ಅನುಮತಿ ಸಿಗದ ಹಿನ್ನೆಲೆ ಪ್ರಮಾಣವಚನ ಮುಂದೂಡಿಕೆ

Must read

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಳಂಬ; ಹೈಕಮಾಂಡ್ ಅನುಮತಿ ಸಿಗದ ಹಿನ್ನೆಲೆ ಪ್ರಮಾಣವಚನ ಮುಂದೂಡಿಕೆ

ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಳಂಬವಾಗಿದ್ದು, ನಿಗದಿಯಂತೆ ನಡೆಯಬೇಕಿದ್ದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇನ್ನೂ ಸಚಿವರ ಅಂತಿಮ ಪಟ್ಟಿಗೆ ಅನುಮೋದನೆ ನೀಡದಿರುವುದೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ನಡೆಯಬೇಕಿದ್ದ ಮಹತ್ವದ ಸಭೆ ನಡೆಯದ ಹಿನ್ನೆಲೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೀಟ್ ಪರೀಕ್ಷೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ತೊಡಗಿದ್ದ ಕಾರಣ ಸಚಿವರ ಪಟ್ಟಿಯ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಮಂಗಳವಾರ ನಡೆಯಬೇಕಿದ್ದ ಸಭೆಯನ್ನು ಇದೀಗ ಬುಧವಾರಕ್ಕೆ ನಿಗದಿಪಡಿಸಲಾಗಿದ್ದು, ಹೈಕಮಾಂಡ್ ಜೊತೆ ಚರ್ಚೆಯ ಬಳಿಕವೇ ಸಚಿವರ ಆಯ್ಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
“ನಮ್ಮ ಪಕ್ಷದಲ್ಲಿ ಹೈಕಮಾಂಡ್ವೇ ಅಂತಿಮ. ಸಚಿವ ಸಂಪುಟ ವಿಸ್ತರಣೆ ಕುರಿತು ನಮ್ಮ ಅಭಿಪ್ರಾಯವನ್ನು ಪಡೆದು ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳುತ್ತದೆ. ಹೊಸ ಮುಖಗಳಿಗೆ ಅವಕಾಶ, ಜಿಲ್ಲಾವಾರು ಹಾಗೂ ಪ್ರಾಂತ್ಯವಾರು ಸಮತೋಲನ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಚಿವರ ಆಯ್ಕೆ ನಡೆಯಲಿದೆ,” ಎಂದು ಮುಖ್ಯಮಂತ್ರಿ ಹೇಳಿದರು.
ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಸಲು ರಾಜ್ಯಪಾಲರಿಂದ ಈಗಾಗಲೇ ಅನುಮತಿ ಪಡೆಯಲಾಗಿತ್ತು. ಆದರೆ ನಿಗದಿಯಾಗಿದ್ದ ಸಭೆ ನಡೆಯದ ಕಾರಣ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ದೆಹಲಿಯಲ್ಲಿ ನಡೆದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ತಮ್ಮನ್ನು ಎಳೆದಾಡಲು ಮುಂದಾದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಪ್ರವೇಶಿಸಿ, “ಅವರು ಮುಖ್ಯಮಂತ್ರಿ, ಅವರನ್ನು ಮುಟ್ಟಬಾರದು” ಎಂದು ಪೊಲೀಸರಿಗೆ ಸೂಚಿಸಿದ್ದರು. ಬಳಿಕ ಪ್ರತಿಭಟನೆ ಸ್ಥಳದಿಂದ ಪಕ್ಕಕ್ಕೆ ಸರಿಯುವಂತೆ ರಾಹುಲ್ ಗಾಂಧಿ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾವು ಸಹಕರಿಸಿದ್ದಾಗಿ ಡಿ.ಕೆ. ಶಿವಕುಮಾರ್ ವಿವರಿಸಿದರು.

- Advertisement -spot_img

More articles

- Advertisement -spot_img

Latest article