ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊನೆ ಕ್ಷಣದ ಬದಲಾವಣೆ; ಮಂಕಾಳು ವೈದ್ಯಗೆ ಕೈತಪ್ಪಿದ ಸ್ಥಾನ, ಎಸ್.ಎಸ್. ಮಲ್ಲಿಕಾರ್ಜುನ್ಗೆ ಸಚಿವ ಪಟ್ಟ
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿ ಕೊನೆ ಕ್ಷಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಎಐಸಿಸಿ ಪ್ರಕಟಿಸಿದ್ದ 20 ನೂತನ ಸಚಿವರ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿದ್ದರೂ, ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.
ಈ ಬೆಳವಣಿಗೆ ಕುರಿತು ಎಐಸಿಸಿ ಸ್ಪಷ್ಟನೆ ನೀಡಿದ್ದು, ನೂತನ ಸಚಿವರ ಅಂತಿಮ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಇರಲಿಲ್ಲ. ಪ್ರಕಟಗೊಂಡ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿರುವುದು ಕೇವಲ ಟೈಪಿಂಗ್ ಮಿಸ್ಟೇಕ್ ಎಂದು ತಿಳಿಸಿದೆ.
ಇದರ ಬೆನ್ನಲ್ಲೇ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕೊನೆ ಕ್ಷಣದಲ್ಲಿ ನಡೆದ ಈ ಬದಲಾವಣೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮಂಕಾಳು ವೈದ್ಯ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕೊನೆಯ ಕ್ಷಣದ ನಿರ್ಧಾರದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಆಗಮಿಸಿದ್ದರೂ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಕಾಳು ವೈದ್ಯ, “ನಾನು ಸಿಎಂ ಅವರನ್ನು ಭೇಟಿ ಮಾಡಿಲ್ಲ, ಅವರು ಸಿಗಲಿಲ್ಲ. ಮತ್ತೊಮ್ಮೆ ಬರುತ್ತೇನೆ” ಎಂದು ಹೇಳಿ, ಅಸಮಾಧಾನದೊಂದಿಗೆ ನಿವಾಸದಿಂದ ತೆರಳಿದರು ಎನ್ನಲಾಗಿದೆ.
ಇನ್ನು ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿದ್ದ ಎಸ್.ಎಸ್. ಮಲ್ಲಿಕಾರ್ಜುನ್, ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡುವ ಬಗ್ಗೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಅಲ್ಲದೆ, ಸಂಸದರಾಗಿರುವ ಅವರ ಪತ್ನಿ ಹಾಗೂ ಶಾಸಕರಾಗಿರುವ ಪುತ್ರ ಕೂಡ ತಮ್ಮ ಸ್ಥಾನ ತ್ಯಜಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿತ್ತು ಎಂದು ಹೇಳಲಾಗಿದೆ.



