ತುಂಗಭದ್ರಾ ನದಿ ಪಾತ್ರದ ರೈತರ ಹಿತಕ್ಕಾಗಿ ಮೂರು ರಾಜ್ಯಗಳ ಐತಿಹಾಸಿಕ ಒಮ್ಮತ: ಡಿ.ಕೆ. ಶಿವಕುಮಾರ್
ಕೊಪ್ಪಳ: ತುಂಗಭದ್ರಾ ನದಿ ಪಾತ್ರದ ರೈತರ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಒಮ್ಮತದ ಐತಿಹಾಸಿಕ ನಿರ್ಧಾರ ಕೈಗೊಂಡಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್ವೇ ಗೇಟ್ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಂಗಭದ್ರಾ ನದಿ ಪಾತ್ರದ ರೈತರ ಹಿತಾಸಕ್ತಿ, ನೀರಿನ ಸಂರಕ್ಷಣೆ ಹಾಗೂ ಭವಿಷ್ಯದ ನೀರಾವರಿ ಯೋಜನೆಗಳ ಕುರಿತು ವ್ಯಾಪಕ ಚರ್ಚೆ ನಡೆಸಲಾಗಿದೆ. ರೈತ ಸಂಘಟನೆಗಳು ಹಾಗೂ ವಿವಿಧ ವೇದಿಕೆಗಳ ಪ್ರತಿನಿಧಿಗಳು ಸಲ್ಲಿಸಿರುವ ಮನವಿಗಳು ಮತ್ತು ಪ್ರಸ್ತಾವನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
“ನವಲಿ ಅಣೆಕಟ್ಟು ನಿರ್ಮಾಣದ ವಿಚಾರವಾಗಲಿ, ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆರವುಗೊಳಿಸಿ ನೀರು ಸಂರಕ್ಷಿಸುವ ಯೋಜನೆಯಾಗಲಿ, ಪ್ರತಿಯೊಂದು ವಿಷಯದ ಕುರಿತೂ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದಿದೆ. ರೈತರ ಹಿತರಕ್ಷಣೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಸಭೆಯಲ್ಲಿ ಕೈಗೊಂಡ ಅಂತಿಮ ತೀರ್ಮಾನಗಳನ್ನು ಕೇಂದ್ರ ಸಚಿವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ” ಎಂದು ತಿಳಿಸಿದರು.
ಇದು ಜಲಸಂಪನ್ಮೂಲ ಇಲಾಖೆಯ ಇತಿಹಾಸದಲ್ಲೇ ಮಹತ್ವದ ದಿನವಾಗಿದ್ದು, ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಹಕ್ಕುಗಳನ್ನು ಕಾಪಾಡುವ ಜೊತೆಗೆ ರೈತರ ಬದುಕು ಭದ್ರಪಡಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
“ನಮ್ಮ ನೀರು, ನಮ್ಮ ಹಕ್ಕು” ಎಂಬ ಧ್ಯೇಯದಡಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಒಂದಾಗಿ ರೈತರ ಹಿತಾಸಕ್ತಿ ಕಾಪಾಡಲು ಈ ಐತಿಹಾಸಿಕ ತೀರ್ಮಾನ ಕೈಗೊಂಡಿವೆ. ಇದು ತುಂಗಭದ್ರಾ ನದಿ ಪಾತ್ರದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತುಂಗಭದ್ರಾ ಯೋಜನೆಯ ಐತಿಹಾಸಿಕ ಹಿನ್ನೆಲೆಯನ್ನು ಉಲ್ಲೇಖಿಸಿದ ಶಿವಕುಮಾರ್, 1860ರಲ್ಲೇ ಬ್ರಿಟಿಷ್ ಇಂಜಿನಿಯರ್ ಸರ್ ಆರ್ಥರ್ ಕಾಟನ್ ಅವರು ಈ ನದಿಗೆ ಜಲಾಶಯ ನಿರ್ಮಿಸುವ ಪರಿಕಲ್ಪನೆ ಮುಂದಿಟ್ಟಿದ್ದರು. ಬಳಿಕ 1949ರಲ್ಲಿ ಕಾಮಗಾರಿ ಆರಂಭಗೊಂಡು ಹಲವು ಹಂತಗಳಲ್ಲಿ ಯೋಜನೆ ಅಭಿವೃದ್ಧಿಗೊಂಡಿದೆ ಎಂದು ಹೇಳಿದರು.
ರಾಯಲಸೀಮೆ, ಬಳ್ಳಾರಿ ಸೇರಿದಂತೆ ವಿವಿಧ ಪ್ರದೇಶಗಳ ಜನರ ಹಿತದೃಷ್ಟಿಯಿಂದ ಹಾಗೂ ನೀರಾವರಿ ಸೌಲಭ್ಯ ವಿಸ್ತರಣೆಯ ಉದ್ದೇಶದಿಂದ ತುಂಗಭದ್ರಾ ಯೋಜನೆ ಜಾರಿಗೊಂಡಿದ್ದು, ಇಂದಿಗೂ ಅದರ ಮಹತ್ವ ಉಳಿದಿದೆ. ರೈತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೀರಿನ ನಿರ್ವಹಣೆ ಹಾಗೂ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.



