ನಮ್ಮಂಥ ಸಾಮಾನ್ಯ ರೈತನ ಮಗನಿಗೆ ರಾಜಕೀಯದಲ್ಲಿ ಅವಕಾಶ ಕಷ್ಟ: ಡಿಕೆಶಿ ಸಂಪುಟದ ವಿರುದ್ಧ ಗುಬ್ಬಿ ಶಾಸಕ ಬೇಸರ
ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ಜನರು ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳುತ್ತಾರೆ. ಆದರೆ ಯಾರು ಹೇಳಬೇಕಿತ್ತೋ ಅವರು ಹೇಳಿಲ್ಲ. ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತರ ಮಕ್ಕಳು ಮೇಲೆ ಬರುವುದು ಕಷ್ಟ” ಎಂದು ಅಸಮಾಧಾನ ಹೊರಹಾಕಿದರು.
“ಜಗಳ ಮಾಡಿ ಸಚಿವ ಸ್ಥಾನ ಪಡೆಯಲು ಅದೇನು ನಮ್ಮ ಅಪ್ಪನ ಆಸ್ತಿ ಅಲ್ಲ. ನಮಗೆ ಯೋಗ್ಯತೆ ಇಲ್ಲ ಎಂಬ ಅರ್ಥ ಬರುತ್ತದೆ. ನಮಗೆ ಯಾವುದೇ ಗಾಡ್ಫಾದರ್ ಇರಲಿಲ್ಲ, ಹೀಗಾಗಿ ಸಚಿವ ಸ್ಥಾನ ತಪ್ಪಿದೆ” ಎಂದು ಶ್ರೀನಿವಾಸ್ ಹೇಳಿದರು.
ರಾಜಕೀಯದ ಹೊಸ ಪಾಠ ಈಗ ಅರ್ಥವಾಗುತ್ತಿದೆ ಎಂದಿರುವ ಅವರು, ಪ್ರಾಮಾಣಿಕತೆಗೆ ಬೆಲೆ ಎಷ್ಟಿದೆ ಎಂಬ ಪ್ರಶ್ನೆ ಮೂಡಿದೆ ಎಂದು ಹೇಳಿದರು.
“ರಾಜಕೀಯ ಡಬಲ್ ಗೇಮ್ ಹಾಗೂ ಮೋಸದಿಂದ ಕೂಡಿದೆ. ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ ಈಗ ಅವಕಾಶ ವಂಚಿತನಾಗಿದ್ದೇನೆ. ನಮ್ಮ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡಬಹುದಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಮಾತನಾಡಿದ ಅವರು, “ಕೆಎಸ್ಆರ್ಟಿಸಿ ನಷ್ಟದಲ್ಲಿದೆ. ಅಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಳೆ ತೆರಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ತಿಳಿಸಿದರು.
ಇನ್ನೂ ಒಂದೂವರೆ ವರ್ಷ ಸಮಯವಿದ್ದು, ಕಾರ್ಯಕರ್ತರು ಹಾಗೂ ಬೆಂಬಲಿಗರು ತೆಗೆದುಕೊಳ್ಳುವ ನಿರ್ಧಾರದಂತೆ ಮುಂದಿನ ರಾಜಕೀಯ ನಡೆ ನಿರ್ಧರಿಸಲಾಗುವುದು ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದ್ದಾರೆ.



