ನಟ ವಿಜಯ್ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ನಟಿ ತ್ರಿಷಾ!
ಚೆನ್ನೈ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಫಲಿತಾಂಶಕ್ಕಾಗಿ ಎಲ್ಲರ ಕಾತರ ಹೆಚ್ಚಿದೆ. ಇದೇ ನಡುವೆ ನಟಿ ತ್ರಿಷಾ ಕೃಷ್ಣನ್ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತ್ರಿಷಾ, ಈ ವಿಶೇಷ ದಿನದ ಅಂಗವಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಅವರು ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿರುವ ಇದೇ ದಿನ ತ್ರಿಷಾ ತಿರುಪತಿಗೆ ಭೇಟಿ ನೀಡಿರುವುದರಿಂದ, ನಟ ವಿಜಯ್ ಅವರ ಗೆಲುವಿಗಾಗಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಮಾತುಗಳು ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ನಟ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಒಂದೇ ಮಾದರಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಈ ಘಟನೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿತ್ತು.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಮತದಾನ ನಡೆದಿತ್ತು. ಒಟ್ಟು 4,654 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ರಾಜ್ಯದಲ್ಲಿ 84.69 ಶೇಕಡಾ ಮತದಾನ ದಾಖಲಾಗಿತ್ತು. ಬಹುಮತ ಪಡೆಯಲು 118 ಸ್ಥಾನಗಳ ಅಗತ್ಯವಿದೆ.
ಈ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ ಹಾಗೂ ಎನ್ಟಿಕೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಳೆದ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು. ಅದರಲ್ಲಿ ಡಿಎಂಕೆ ಏಕಾಂಗಿಯಾಗಿ 133 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿತ್ತು. ಎಐಎಡಿಎಂಕೆ ಮೈತ್ರಿಕೂಟ 75 ಸ್ಥಾನಗಳನ್ನು ಗಳಿಸಿತ್ತು.



