ಅನಿಲ್-ಉದಯ್ ಸಾವಿಗೆ ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟ ರವಿವರ್ಮ

1
48

ದುನಿಯಾ ವಿಜಯ್ ನಟಸಿ, ನಾಗಶೇಖರ್ ನಿರ್ದೇಶನ ಮಾಡಿದ್ದ ‘ಮಾಸ್ತಿಗುಡಿ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಟರಾದ ಅನಿಲ್ ಹಾಗೂ ಉದಯ್‌ ಹೆಲಿಕಾಪ್ಟರ್‌ನಿಂದ ನೀರಿಗೆ ಬಿದ್ದು ಮುಳುಗಿ ಅಸುನೀಗಿದರು.

ಉದಯ್ ಹಾಗೂ ಅನಿಲ್ ಸಾವು ಕನ್ನಡ ಚಿತ್ರರಂಗವನ್ನು ಬರಸಿಡಿಲಿನಂತೆ ಅಪ್ಪಳಿಸಿತು. ದುರಂತಕ್ಕೆ ಸಾಹಸ ನಿರ್ದೇಶಕರಾಗಿದ್ದ ರವಿವರ್ಮ ಅವರನ್ನು ಹೊಣೆ ಮಾಡಿ ಅವರು ಜೈಲಿಗೆ ಸಹ ಹೋಗಿ ಬಂದರು.

‘ನ್ಯೂಸ್‌ಫಸ್ಟ್‌’ಗೆ ನೀಡಿರುವ ಸಂದರ್ಶನದಲ್ಲಿ ಘಟನೆ ಬಗ್ಗೆ ವಿವರವಾಗಿ ಮಾತನಾಡಿರುವ ರವಿವರ್ಮ. ಘಟನೆ ನಡೆದಿದ್ದು ಹೇಗೆ? ಅದಕ್ಕೆ ಕಾರಣ ಯಾರು? ಘಟನೆ ನಂತರ ಏನಾಯಿತು? ಆ ಘಟನೆಯಿಂದ ತಮ್ಮ ಜೀವನದ ಮೇಲೆ ಆದ ಪರಿಣಾಮ ಏನು? ಎಲ್ಲವನ್ನೂ ಮಾತನಾಡಿದ್ದಾರೆ. ಸಿನಿಮಾಕ್ಕೆ ಬರುವ ಮುಂಚೆಯಿಂದಲೂ ನಾನು, ಅನಿಲ್ ಗೆಳೆಯರು. ಅವನು ಮೊದಲ ಬಾರಿಗೆ ಹಣ ಹೂಡಿದ್ದ ಸಿನಿಮಾ ‘ಮಾಸ್ತಿಗುಡಿ’ ಹಾಗಾಗಿ ನನ್ನ ಬಳಿ ಬಂದು ಒಂದು ಫೈಟ್ ಡೈರೆಕ್ಟ್ ಮಾಡುವಂತೆ ಕೇಳಿಕೊಂಡ. ನಾನು ಬೇಡವೆಂದರೂ ಪದೇ-ಪದೇ ಒತ್ತಾಯ ಮಾಡಿದ. ನಾನು ಆ ಒಂದು ದಿನಕ್ಕಾಗಿ ಮಾತ್ರವೇ ಚಿತ್ರೀಕರಣಕ್ಕೆ ಬಂದು ಫೈಟ್ ಮಾಡಿಕೊಡಲು ಒಪ್ಪಿಕೊಂಡಿದ್ದೆ. ಜೊತೆಗೆ ಫೋನ್‌ನಲ್ಲಿಯೇ ಮತ್ತೊಬ್ಬ ನಿರ್ಮಾಪಕರಿಗೆ ಏನೇನು ಬೇಕಾಗಬಹುದು ಎಂದು ಪಟ್ಟಿ ಕೊಟ್ಟಿದ್ದೆ ಎಂದಿದ್ದಾರೆ ರವಿವರ್ಮ.

‘ಎರಡು ಮೋಟಾರ್ ಬೈಕ್‌, ಎರಡು ಮೋಟಾರ್ ದೋಣಿ, ಕನಿಷ್ಟ ಹದಿನೈದು ಈಜುಗಾರರು. ಕೆಲವು ತೆಪ್ಪಗಳು ಬೇಕು ಎಂದು ನಾನು ಕೇಳಿದ್ದೆ. ಆದರೆ ಅಲ್ಲಿಗೆ ತರಿಸಿದ್ದು ಕೇವಲ ಎರಡು ಮೋಟರ್ ಬೋಟ್ ಅದರಲ್ಲಿ ಒಂದು ಕೆಟ್ಟು ಹೋಗಿತ್ತು. ಇದನ್ನೆಲ್ಲ ನೋಡಿ ನಾನು ಹೇಳಿದೆ. ಡೈವ್ ಮಾಡುವುದು ಬೇಡ, ಸಿಜಿಐ ಗ್ರಾಫಿಕ್ಸ್ ಬಳಸಿ ಕೆಲಸ ಮುಗಿಸೋಣ ಎಂದು. ನಿರ್ದೇಶಕರೂ ಸಹ ಒಪ್ಪಿದ್ದರು. ಆದರೆ ಅಷ್ಟರಲ್ಲಾಗಲೇ ಮಾಧ್ಯಮದವರು ಬಂದಿದ್ದರು. ಅವರು ಚಿತ್ರೀಕರಣವನ್ನು ಲೈವ್ ಮಾಡುವುದಾಗಿ ಹೇಳಿದ್ದರು. ಹಾಗಾಗಿ ಉದಯ್, ಅನಿಲ್, ದುನಿಯಾ ವಿಜಯ್ ಲೈವ್‌ ಆಗಿ ನೀರಿಗೆ ಹಾರಲು ರೆಡಿಯಾದರು’ ಎಂದರು ಎಂದು ಅಂದಿನ ಘಟನೆ ಬಿಚ್ಚಿಟ್ಟಿದ್ದಾರೆ ರವಿವರ್ಮ.

‘ಉದಯ್, ಅನಿಲ್ ಹಾಗೂ ದುನಿಯಾ ವಿಜಯ್‌ಗೆ ಲೈಫ್ ಜಾಕೆಟ್ ಹಾಕಿಕೊಳ್ಳಲು ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ಉದಯ್ ಹಾಗೂ ಅನಿಲ್‌ರ ಸಿಕ್ಸ್‌ಪ್ಯಾಕ್‌ ಅನ್ನು ತೋರಿಸಬೇಕಿತ್ತು. ದುನಿಯಾ ವಿಜಯ್ ಸಹ ಒಪ್ಪಿರಲಿಲ್ಲ. ಆದರೆ ಅವರಿಗೆ ಬಲವಂತ ಮಾಡಿ ಲೈಫ್ ಜಾಕೆಟ್ ತೊಡಿಸಿ ಅದರ ಮೇಲೆ ಅಂಗಿ ತೊಡಿಸಿದೆ. ಅನಿಲ್ ಹಾಗೂ ಉದಯ್‌ಗೆ ಕಾಲಿಗೆ ಟ್ಯೂಬ್‌ಗಳನ್ನು ಕಟ್ಟಲು ಯತ್ನಿಸಿದೆವು ಆದರೆ ಅವರಿಬ್ಬರೂ ಬಹಳ ಟೈಟ್‌ ಆದ ಪ್ಯಾಂಟ್ ಧರಿಸಿದ್ದರಿಂದ ಅದು ಸಹ ಸಾಧ್ಯವಾಗಲಿಲ್ಲ’ ಎಂದು ತಾವು ತೆಗೆದುಕೊಳ್ಳಲು ಯತ್ನಿಸಿದ ಮುನ್ನೆಚ್ಚರಿಕೆಯ ಬಗ್ಗೆ ರವಿವರ್ಮ ಮಾಹಿತಿ ನೀಡಿದರು.

‘ಮೊದಲು ಕೆರೆಯ ಅಂಚಿನಲ್ಲಿಯೇ ಡೈವ್ ಮಾಡುವ ಯೋಚನೆ ಮಾಡಿದೆವು. ಆದರೆ ಅಲ್ಲೆಲ್ಲ ಮೀನಿನ ಬಲೆಗಳಿರುತ್ತವೆ ಎಂದರು ನಂತರ ಇನ್ನು ಸ್ವಲ್ಪ ಒಳಕ್ಕೆ ಹೋದರೆ ಅಲ್ಲಿ ದೊಡ್ಡ ಏರಿ ಇದೆ ಅಲ್ಲಿ ಬಿದ್ದರೆ ಕಾಲು ಮುರಿಯುತ್ತದೆ ಬೇಡವೆಂದರು, ಕೊನೆಗೆ ಕೆರೆಯ ಮಧ್ಯದಲ್ಲಿ ಡೈವ್ ಮಾಡುವುದು ಎಂದಾಯಿತು. ಆಗ ನನಗೆ ತುಸು ಭಯ ಆಯಿತು. ನಾನು ಮೂವರನ್ನು ಮತ್ತೆ-ಮತ್ತೆ ಕೇಳಿದೆ ನಿಮ್ಮ ಕೈಯಿಂದ ಸಾಧ್ಯವಾ? ಎಂದು. ಮೂವರೂ ಸಹ ನಾವು ಮಾಡಿಯೇ ತೀರುವುದಾಗಿ ಹೇಳಿದರು. ಆ ಒಳಗಾಗಲೇ ಅವರು ಮಾಧ್ಯಮದವರಿಗೆ ಸಂದರ್ಶನಗಳನ್ನು ನೀಡಿ, ತಾವು ಡೈವ್ ಮಾಡುವುದಾಗಿ ಹೇಳಿ ಆಗಿತ್ತು. ನಿರ್ದೇಶಕರಿಗೆ ಸಹ ಅವರು ಡೈವ್ ಮಾಡುವುದು ಇಷ್ಟವಿರಲಿಲ್ಲ’ ಎಂದರು ರವಿವರ್ಮಾ.

‘ಆ ಸಮಯದಲ್ಲಿ ನಾನು ಹೆಲಿಕಾಪ್ಟರ್‌ ಪೈಲೆಟ್ ಅನ್ನು ಕೇಳಿದೆ. ಆ ಮೂವರು ಕೆಳಗೆ ಬಿದ್ದ ಕೂಡಲೇ ನೀವು ಲೈಫ್ ಜಾಕೆಟ್ ನೀರಿಗೆ ಹಾಕಲಿಕ್ಕಾಗುತ್ತದಾ ಎಂದು. ಅವರು ಇಲ್ಲ ಗಾಳಿಗೆ ಲೈಫ್ ಜಾಕೆಟ್ ಕೆಳಜೆ ಬೀಳದೆ ಹಿಂದಕ್ಕೆ ಹಾರಿ ಹೆಲಿಕಾಪ್ಟರ್‌ನ ಹಿಂದಿನ ರೆಕ್ಕೆಗೆ ತಾಗುತ್ತದೆ ಎಂದರು. ಹೋಗಲಿ ಹಗ್ಗವನ್ನಾದರೂ ಹಾಕಿ ಎಂದೆ. ಆದರೆ ಆತ ಕೆಳಗೆ ಬಲೆ ಅಥವ ಇನ್ನಾವುದೇ ವಸ್ತುಗಳಿಗೆ ಹಗ್ಗೆ ಸಿಕ್ಕಿಕೊಂಡರೆ ಹೆಲೆಕಾಪ್ಟರ್‌ ಮುಂದಕ್ಕೆ ಹಾರಲಾರದೆ ಕ್ರ್ಯಾಷ್ ಆಗುತ್ತದೆ ಎಂದರು. ಕೊನೆಗೆ ಮೂವರಿಗೂ ನುರಿತ ಈಜುಗಾರರನ್ನು ಡ್ಯೂಪ್ ಆಗಿ ಬಳಸೋಣ ಎಂದುಕೊಂಡೆವು ಆದರೆ ಮೀಡಿಯಾ ಮುಂದೆ ಲೈವ್ ಡೈವ್ ಮಾಡಬೇಕೆಂದು ಡ್ಯೂಪ್ ಮಾಡಲು ಮೂವರೂ ಒಪ್ಪಲಿಲ್ಲ. ಅಂದು ಎಲ್ಲವೂ ನನ್ನ ವಿರುದ್ಧ ದಿಕ್ಕಿನಲ್ಲಿಯೇ ನಡೆಯುತ್ತಿತ್ತು ಎಂದು ನಂತರ ಬಹಳ ಅನಿಸಿತು’ ಎಂದು ಮರುಗಿದ್ದಾರೆ ರವಿವರ್ಮ.

 

1 COMMENT

LEAVE A REPLY

Please enter your comment!
Please enter your name here