No menu items!
24.9 C
Munich
Saturday, May 23, 2026

ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಾರಂತೆ ಸೋತು ಸುಣ್ಣವಾದ ಪೂಜಾ ಹೆಗ್ಡೆ ; ಹುಡುಗ ಯಾರು ?

Must read

ಅದೃಷ್ಟ ಒಮ್ಮೆ ಕೈ ಹಿಡಿದರೆ ಸಾಕು, ರಾತ್ರೋರಾತ್ರಿ ಬದುಕು ಬದಲಾಗಿಬಿಡುತ್ತೆ. ಆದರೆ ಅದೇ ಅದೃಷ್ಟ ಚೂರು ಆಚೀಚೆ ಆದರೂ ಶಿಖರದಲ್ಲಿದ್ದವರು ಪಾತಾಳಕ್ಕೆ ಕುಸಿಯತ್ತಾರೆ. ಸದ್ಯ ಸೌತ್ ಮತ್ತು ನಾರ್ತ್ ಸಿನಿ ದುನಿಯಾದಲ್ಲಿ ಸಖತ್ ಸದ್ದು ಮಾಡ್ತಿರೋ ‘ಬುಟ್ಟ ಬೊಮ್ಮ’ ಪೂಜಾ ಹೆಗ್ಡೆ ಕಥೆಯೂ ಇದೇ ಆಗಿದೆ. ಒಂದು ಕಾಲದಲ್ಲಿ ‘ಗೋಲ್ಡನ್ ಲೆಗ್’ ಎಂದೇ ಖ್ಯಾತಿ ಗಳಿಸಿದ್ದ ಪೂಜಾ, ಸಾಲು ಸಾಲು ಸೋಲುಗಳಿಂದಾಗಿ ಈಗ ಐರನ್ ಲೆಗ್ ಪಟ್ಟ ಹೊತ್ತು ಮಂಕಾಗಿದ್ದಾರೆ.

ಹಾಗೇ ನೋಡಿದರೆ ಪೂಜಾ ಹೆಗ್ಡೆ ವೃತ್ತಿ ಬದುಕು ಚೆನ್ನಾಗಿಯೇ ಇತ್ತು. ಆದರೆ ಬಾಲಿವುಡ್ ಸಹವಾಸ ಇವರನ್ನು ಈಗ ಅಜ್ಞಾತವಾಸದ ಬಾಗಿಲಿಗೆ ಕರೆತಂದು ನಿಲ್ಲಿಸಿದೆ.

ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದ ಪೂಜಾ, ಹಿಂದಿ ಚಿತ್ರರಂಗದ ಮೇಲೆ ಕಣ್ಣು ಹಾಕಿದರು. ಆದರೆ ಅಲ್ಲಿ ಅದೃಷ್ಟ ಕೈಕೊಟ್ಟಿತು. ‘ಹೌಸ್‌ಫುಲ್ 4’ ಗೆದ್ದರೂ ಕ್ರೆಡಿಟ್ ಸಿಗಲಿಲ್ಲ, ‘ಸರ್ಕಸ್’ ಮತ್ತು ಸಲ್ಮಾನ್ ಖಾನ್ ಜೊತೆಗಿನ ‘ಕಿಸಿ ಕಾ ಭಾಯಿ ಕಿಸಿ ಕಾ ಜಾನ್’ ಮಕಾಡೆ ಮಲಗಿದವು.

ಇತ್ತ ಸೌತ್‌ನಲ್ಲಿ ‘ಬೀಸ್ಟ್’, ‘ರಾಧೆ ಶ್ಯಾಮ್’ ಮತ್ತು ‘ಆಚಾರ್ಯ’ ಚಿತ್ರಗಳು ಫ್ಲಾಪ್ ಆದ ಮೇಲೆ ನಿರ್ಮಾಪಕರು ಪೂಜಾರನ್ನ ಮರೆಯಲಾರಂಭಿಸಿದರು. 4 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಐಟಂ ಸಾಂಗ್‌ಗಳಿಗಷ್ಟೇ ಸೀಮಿತವಾಗುತ್ತಿರೋದು ನಿಜಕ್ಕೂ ವಿಷಾದನೀಯ.

ಸದ್ಯ ಪೂಜಾ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲ. ಕೆರಿಯರ್ ಗ್ರಾಫ್ ಕೆಳಗೆ ಇಳಿಯುತ್ತಿರುವಾಗಲೇ ಇತ್ತ ಪೂಜಾ ಮದುವೆ ಸುದ್ದಿಯೇ ಈಗ ಚಿತ್ರರಂಗದ ಹಾಟ್ ಟಾಪಿಕ್ ಆಗಿದೆ. ಈ ಹಿಂದೆ ಮದುವೆ ವಿಚಾರಕ್ಕೆ ಗರಂ ಆಗುತ್ತಿದ್ದ ಪೂಜಾ, ಈಗ ಸದ್ದಿಲ್ಲದೆ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಆರು ವರ್ಷಗಳ ಹಿಂದಿನ ಇವರ ಪ್ರೇಮ ಪುರಾಣ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಬಾಲಿವುಡ್‌ನ ಸ್ಟಾರ್ ಪುತ್ರನ ಜೊತೆ ಪೂಜಾ ಹಸೆಮಣೆ ಏರಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.

ಅಂದಹಾಗೆ, ಪೂಜಾ ಮನಗೆದ್ದ ಆ ಹುಡುಗ ಬೇರೆ ಯಾರೂ ಅಲ್ಲ, ಹಿರಿಯ ಬಾಲಿವುಡ್ ನಟ ವಿನೋದ್ ಮೆಹ್ರಾ ಪುತ್ರ ರೋಹನ್ ಮೆಹ್ರಾ. ರೋಹನ್ ಕೂಡ ಹಲವು ಸಿನಿಮಾ ಮತ್ತು ವೆಬ್ ಸೀರೀಸ್ ಮಾಡಿದರೂ ಯಶಸ್ಸು ಮಾತ್ರ ಸಿಗಲಿಲ್ಲ. 2020ರಲ್ಲಿ ಒಂದು ಪಾರ್ಟಿಯಲ್ಲಿ ಶುರುವಾದ ಇವರಿಬ್ಬರ ಪರಿಚಯ, ಹಂತ ಹಂತವಾಗಿ ಪ್ರೀತಿಗೆ ತಿರುಗಿದೆ. ಆರಂಭದಲ್ಲಿ ಕೇವಲ ಸ್ನೇಹಿತರು ಎನ್ನುತ್ತಿದ್ದ ಈ ಜೋಡಿ ಈಗ ಜೀವನಪೂರ್ತಿ ಒಂದಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಫಿಲ್ಮ್ ಫೇರ್ ವರದಿಯ ಪ್ರಕಾರ, ಪೂಜಾ ಮತ್ತು ರೋಹನ್ ಸದ್ಯ ಡೇಟಿಂಗ್‌ನಲ್ಲಿದ್ದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರಂತೆ. ಇಬ್ಬರೂ ಜೊತೆಯಾಗಿ ಪ್ರವಾಸ ಮಾಡುತ್ತಾ, ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆರಿಯರ್ ಮಂಕಾಗುತ್ತಿರುವ ಈ ಸಮಯದಲ್ಲಿ ಪೂಜಾ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟು ಪರ್ಸನಲ್ ಲೈಫ್‌ನಲ್ಲಿ ಸೆಟಲ್ ಆಗಲು ಪ್ಲಾನ್ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.

ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಾಗ ನಾಯಕಿಯರು ಮದುವೆಗೆ ಮುಂದಾಗೋದು ಚಿತ್ರರಂಗದಲ್ಲಿ ಮಾಮೂಲಿ. ಈಗ ಪೂಜಾ ಕೂಡ ಅದೇ ಹಾದಿ ಹಿಡಿದಂತೆ ಕಾಣುತ್ತಿದೆ. ಈ ವರ್ಷಾಂತ್ಯಕ್ಕೆ ಪೂಜಾ ಮತ್ತು ರೋಹನ್ ಕಲ್ಯಾಣ ನಡೆಯುವ ಸಾಧ್ಯತೆಗಳಿದ್ದು, ಪೂಜಾ ಸದ್ಯದಲ್ಲೇ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ.

ನಿಜಕ್ಕೂ ‘ಬುಟ್ಟ ಬೊಮ್ಮ’ ರೋಹನ್ ಮೆಹ್ರಾ ಮದುವೆಯಾಗ್ತಾರಾ? ಈ ಪ್ರಶ್ನೆಗೆ ಅಧಿಕೃತ ಉತ್ತರ ಸದ್ಯದಲ್ಲೇ ಸಿಗಲಿದೆ.

- Advertisement -spot_img

More articles

- Advertisement -spot_img

Latest article