No menu items!
31.1 C
Munich
Friday, July 31, 2026

ಕಾವೇರಿ ನೀರಿನ ಬಗ್ಗೆ ಕಾನೂನು ತಜ್ಞರ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

Must read

ಕಾವೇರಿ ನೀರಿನ ಬಗ್ಗೆ ಕಾನೂನು ತಜ್ಞರ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನು ತಜ್ಞರ ಸಲಹೆ ಪಡೆಯುವುದರ ಜೊತೆಗೆ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ಇಂತಹ ಪರಿಸ್ಥಿತಿ ಈ ಹಿಂದೆ 2016, 2017, 2018 ಹಾಗೂ 2023ರಲ್ಲೂ ಎದುರಾಗಿತ್ತು ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲೇ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. 177 ಟಿಎಂಸಿ ನೀರು ಹರಿಸಬೇಕಿದ್ದರೂ 400 ಟಿಎಂಸಿಗೂ ಹೆಚ್ಚು ನೀರು ಹರಿದು, ಹೆಚ್ಚಿನ ಪ್ರಮಾಣದ ನೀರು ಸಮುದ್ರ ಸೇರಿತ್ತು ಎಂದು ಅವರು ವಿವರಿಸಿದರು.
CWMAಗೆ ಮೇಲ್ಮನವಿ ಸಲ್ಲಿಸಿದ್ದೇವೆ
ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರು ಹರಿಸುವ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ ಎಂದು ಸಿಎಂ ತಿಳಿಸಿದರು.
ಈ ವೇಳೆ, “ನಮ್ಮ ಅಧಿಕಾರಿಗಳು ಸಭೆಗೆ ಹೋಗಿಲ್ಲ” ಎಂಬ ವಿರೋಧ ಪಕ್ಷದ ಆರೋಪವನ್ನು ತಳ್ಳಿಹಾಕಿದ ಅವರು, ರಾಜ್ಯದ ಜನರಿಗೆ ಸತ್ಯಾಂಶ ತಿಳಿಸುವುದು ತಮ್ಮ ಜವಾಬ್ದಾರಿ ಎಂದರು.
ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿದ್ದ ಸಲಹೆಗಾರರನ್ನೇ ಸರ್ಕಾರ ಮುಂದುವರಿಸಿದ್ದು, ಅವರೂ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸ್ಪಷ್ಟಪಡಿಸಿದರು.
ನೀರಿನ ಪ್ರಮಾಣ ಕಡಿಮೆ ಮಾಡುವಂತೆ ಮನವಿ
ನೀರು ಹರಿಸುವ ಪ್ರಮಾಣವನ್ನು ಕಡಿಮೆ ಮಾಡಬೇಕು, ಆದೇಶದ ಜಾರಿಯನ್ನು ಮುಂದೂಡಬೇಕು ಹಾಗೂ ರಾಜ್ಯಕ್ಕೆ ಕಾಲಾವಕಾಶ ನೀಡಬೇಕು ಎಂದು ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಸಿಎಂ ಹೇಳಿದರು.
ಆದರೆ, ತಮಿಳುನಾಡು ಪರ ವಾದ ಮಂಡಿಸಿದ ಪ್ರತಿನಿಧಿಗಳು ಕರ್ನಾಟಕಕ್ಕೆ ಸಾಕಷ್ಟು ಒಳಹರಿವು ಇರುವುದರಿಂದ ಇನ್ನಷ್ಟು ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು ಎಂದರು.
ರಾಜ್ಯದ ಪರವಾಗಿ ಅಡ್ವೋಕೇಟ್ ಜನರಲ್ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳು ಸಮಗ್ರ ವಾದ ಮಂಡಿಸಿದ್ದಾರೆ. ಆದರೂ, ರಾಜ್ಯದಲ್ಲಿ ಒಳಹರಿವು ಇರುವುದರಿಂದ 3,500 ಕ್ಯೂಸೆಕ್ ನೀರು ಬಿಡುವಂತೆ ನೀಡಿರುವ ಆದೇಶ ಸಮಂಜಸವಾಗಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನು ಮತ್ತು ಆಡಳಿತಾತ್ಮಕ ಎಲ್ಲ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article