ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಅಂದ್ರೆನೇ ವಿವಾದಗಳ ಸರಮಾಲೆ. ಮೈದಾನದಲ್ಲಿದ್ದಾಗ ಬ್ಯಾಟ್‌ನಿಂದ ಎದುರಾಳಿ ಬೌಲರ್ ಗಳನ್ನು ಚೆಂಡಾಡುತ್ತಿದ್ದ ಡೇವಿಡ್ ವಾರ್ನರ್, ಮೈದಾನದಿಂದ ಆಚೆ ಬಂದಾಗ ಮಾತ್ರ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಸುದ್ದಿ ಗಿಟ್ಟಿಸಿಕೊಳ್ಳೋದ್ರಲ್ಲಿ ಸದಾ ಮುಂದು. 2018ರ ಸ್ಯಾಂಡ್‌ಪೇಪರ್ ಬಾಲ್ ಟ್ಯಾಂಪರಿಂಗ್ ಹಗರಣದ ಕಪ್ಪು ಚುಕ್ಕೆ ಮಾಸುವ ಮುನ್ನವೇ, ವಾರ್ನರ್ ಈಗ ಮತ್ತೆ ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರೋ ಈ ಆಸೀಸ್ ದಿಗ್ಗಜ, ಇದೀಗ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಪೋಲಿಸ್ ಬಲೆಗೆ ಬಿದ್ದದ್ದು ಹೇಗೆ? ಏಪ್ರಿಲ್ 5ರ ಘಟನಾವಳಿ
ಅಷ್ಟಕ್ಕೂ ನಡೆದಿದ್ದೇನು ಅಂತ ನೋಡೋದಾದ್ರೆ, ಈ ಕಥೆ ಶುರುವಾಗಿದ್ದು ಕಳೆದ ಏಪ್ರಿಲ್ 5ರಂದು. ಸಿಡ್ನಿಯ ಮರೌಬ್ರಾ ಉಪನಗರದಲ್ಲಿ ವಾರ್ನರ್ ತಮ್ಮ ವ್ಯಾನ್ ಚಲಾಯಿಸಿಕೊಂಡು ಹೋಗುತ್ತಿದ್ದರು. ರಸ್ತೆಯಲ್ಲಿ ಪೊಲೀಸರು ‘Random Breath Testing’ (RBT) ಮಾಡ್ತಿರೋದನ್ನು ಕಂಡ ವಾರ್ನರ್, ಅನುಮಾನ ಬಾರದಂತೆ ಸ್ವಲ್ಪ ದೂರದಲ್ಲೇ ತಮ್ಮ ವಾಹನವನ್ನು ನಿಲ್ಲಿಸಿದ್ದರು. ಆದರೆ ವಾರ್ನರ್ ನಡೆ ಕಂಡು ಡೌಟ್ ಪಟ್ಟ ಪೊಲೀಸರು ತಕ್ಷಣ ಹೋಗಿ ತಪಾಸಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿತ್ತು. ವಾರ್ನರ್ ಕುಡಿದು ತೂರಾಡುತ್ತಿದ್ದುದ್ದು ಪೊಲೀಸರಿಗೆ ಕನ್ಫರ್ಮ್ ಆಗಿತ್ತು.
ಮಿತಿಗಿಂತ 2.5 ಪಟ್ಟು ಹೆಚ್ಚು ಎಣ್ಣೆ: ಕೋರ್ಟ್‌ನಲ್ಲಿ ತಪ್ಪೊಪ್ಪಿಗೆ
ಕೂಡಲೇ ಅವರನ್ನು ಮರೌಬ್ರಾ ಪೊಲೀಸ್ ಠಾಣೆಗೆ ಕರೆದೊಯ್ದು ಬ್ಲಡ್ ಟೆಸ್ಟ್ ನಡೆಸಿದಾಗ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ವಾರ್ನರ್ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ಬರೋಬ್ಬರಿ 0.104 BAC ಇತ್ತು. ಆಸ್ಟ್ರೇಲಿಯಾದ ಕಾನೂನು ಪ್ರಕಾರ ವಾಹನ ಚಲಾಯಿಸುವಾಗ ಇರಬೇಕಾದ ಮಿತಿ ಕೇವಲ 0.05. ಅಂದರೆ ವಾರ್ನರ್ ದೇಹದಲ್ಲಿದ್ದ ಎಣ್ಣೆಯ ಪ್ರಮಾಣ ಕಾನೂನುಬದ್ಧ ಮಿತಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿತ್ತು. ಕೋರ್ಟ್ ವಿಚಾರಣೆ ವೇಳೆ ವಾರ್ನರ್ ಪರ ವಕೀಲ ಬಾಬಿ ಹಿಲ್, ಸ್ನೇಹಿತರ ಮನೆಯಲ್ಲಿ 3 ಗ್ಲಾಸ್ ವೈನ್ ಕುಡಿದ ಬಳಿಕ ಉಬರ್ ಬುಕ್ ಮಾಡದೇ ತಾನೇ ಕಾರು ಚಲಾಯಿಸಿದ್ದು ವಾರ್ನರ್ ಮಾಡಿದ ಮೂರ್ಖತನದ ಕೆಲಸ ಅಂತ ಜಡ್ಜ್ ಎದುರು ಒಪ್ಪಿಕೊಂಡಿದ್ದಾರೆ.
ಆಗಸ್ಟ್ 18ಕ್ಕೆ ಅಂತಿಮ ತೀರ್ಪು: ಜೈಲು ಶಿಕ್ಷೆಯಾಗೋದು ಖಚಿತ?
ಈಗ ವಿಷಯ ಏನು ಅಂದ್ರೆ, ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ವಾರ್ನರ್ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಅಂತಿಮ ತೀರ್ಪನ್ನು ಆಗಸ್ಟ್ 18ಕ್ಕೆ ಕಾಯ್ದಿರಿಸಿದೆ. ಆದರೆ ಮೂಲಗಳ ಪ್ರಕಾರ ವಾರ್ನರ್‌ಗೆ ಕಠಿಣ ಶಿಕ್ಷೆಯಾಗೋದು ಆಲ್ಮೋಸ್ಟ್ ಕನ್ಫರ್ಮ್. ಕನಿಷ್ಠ 6 ತಿಂಗಳ ಕಾಲ ಅವರ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದ್ದು, ಸುಮಾರು $2,200 ಆಸ್ಟ್ರೇಲಿಯನ್ ಡಾಲರ್ (ಅಂದಾಜು ₹1.21 ಲಕ್ಷಕ್ಕೂ ಅಧಿಕ) ದಂಡ ಬೀಳಲಿದೆ. ಇಷ್ಟೇ ಅಲ್ಲ, ಪರಿಸ್ಥಿತಿ ಗಂಭೀರವಾದರೆ ಗರಿಷ್ಠ 9 ತಿಂಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಸಿಡ್ನಿ ಥಂಡರ್ ಕ್ಯಾಪ್ಟನ್ಸಿಗೆ ಬಿಗ್ ಕುತ್ತು
ಈ ‘ಡ್ರಿಂಕ್ ಅಂಡ್ ಡ್ರೈವ್’ ಕಿರಿಕ್‌ನಿಂದಾಗಿ ವಾರ್ನರ್‌ಗೆ ಜೈಲು ಭೀತಿ ಮಾತ್ರವಲ್ಲ, ಅವರ ಬಿಗ್ ಬ್ಯಾಷ್ ಲೀಗ್ (BBL) ನಾಯಕತ್ವಕ್ಕೂ ದೊಡ್ಡ ಕುತ್ತು ಬಂದೊದಗಿದೆ. 2018ರಲ್ಲಿ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ವಾರ್ನರ್ ಮೇಲಿದ್ದ ಜೀವಿತಾವಧಿ ನಾಯಕತ್ವದ ನಿಷೇಧವನ್ನು ಕೇವಲ ಕಳೆದ ವರ್ಷವಷ್ಟೇ ತೆರವುಗೊಳಿಸಿತ್ತು. ಅದಾದ ಬೆನ್ನಲ್ಲೇ ಬಿಗ್ ಬ್ಯಾಷ್‌ನಲ್ಲಿ ‘ಸಿಡ್ನಿ ಥಂಡರ್’ ತಂಡದ ನಾಯಕನ್ನಾಗಿ ಅವರನ್ನು ನೇಮಿಸಲಾಗಿತ್ತು. ಆದರೆ ಈಗ ಈ ಹೊಸ ವಿವಾದ ಸಿಡ್ನಿ ಥಂಡರ್ ಫ್ರಾಂಚೈಸಿಗೆ ತೀವ್ರ ಮುಜುಗರ ಉಂಟುಮಾಡಿದೆ.
ಸರಕಾರದ ಜಾಗೃತಿ ರಾಯಭಾರಿ ತಂಡಕ್ಕೇ ಮುಜುಗರ
ವಿಶೇಷವೆಂದರೆ ಸಿಡ್ನಿ ಥಂಡರ್, ಸಿಡ್ನಿ ಸಿಕ್ಸರ್ಸ್ ಮತ್ತು NSW ಬ್ಲೂಸ್ ತಂಡಗಳು ಆಸ್ಟ್ರೇಲಿಯಾ ರಾಜ್ಯ ಸರ್ಕಾರದ ‘ಮದ್ಯಪಾನ ಮತ್ತು ವಾಹನ ಚಾಲನೆ ವಿರೋಧಿ’ ಜಾಗೃತಿ ಅಭಿಯಾನದ ಅಧಿಕೃತ ಭಾಗವಾಗಿವೆ. ಇಂತಹ ತಂಡದ ನಾಯಕನೇ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿರುವುದು ಫ್ರಾಂಚೈಸಿಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಗಂಭೀರವಾಗಿ ಮಾತನಾಡಿರುವ ಕ್ರಿಕೆಟ್ NSW ಮುಖ್ಯ ಕಾರ್ಯನಿರ್ವಾಹಕ ಲೀ ಜರ್ಮನ್, ನಾವು ಸುರಕ್ಷಿತ ಚಾಲನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಮದ್ಯಪಾನ ಮಾಡಿ ವಾಹನ ಓಡಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳುವ ಮೂಲಕ ವಾರ್ನರ್ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.
ಮುಂಬರುವ BBLನಲ್ಲಿ ಕೇವಲ ಪ್ಲೇಯರ್? ಫ್ರಾಂಚೈಸಿ ಮಾಸ್ಟರ್ ಪ್ಲಾನ್
ಇತ್ತೀಚೆಗಷ್ಟೇ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (PSL) ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ವಾರ್ನರ್, ಈಗ ಸಿಡ್ನಿ ಥಂಡರ್ ನಾಯಕತ್ವದಿಂದ ಕೆಳಗಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮುಂಬರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ಮಂಡಳಿಯು ಅವರನ್ನು ಕೇವಲ ಆಟಗಾರನಾಗಿ ಮಾತ್ರ ಉಳಿಸಿಕೊಂಡು, ಕ್ಯಾಪ್ಟನ್ಸಿಯಿಂದ ಕೋಕ್ ನೀಡಲು ಮಾಸ್ಟರ್ ಪ್ಲಾನ್ ಮಾಡಿದೆ. ಒಟ್ಟಿನಲ್ಲಿ, 3 ಗ್ಲಾಸ್ ವೈನ್‌ನ ಅಮಲಿನಲ್ಲಿ ಮಾಡಿದ ಸಣ್ಣ ಎಡವಟ್ಟಿನಿಂದಾಗಿ, ಈಗ ಡೇವಿಡ್ ವಾರ್ನರ್ ಅವರ ಇಡೀ ಕ್ರಿಕೆಟ್ ಕರಿಯರ್ ಮತ್ತು ಇಮೇಜ್‌ಗೆ ಕೊಳ್ಳಿ ಬಿದ್ದಂತಾಗಿದೆ.



