No menu items!
19.4 C
Munich
Saturday, May 2, 2026

ದೆಹಲಿಯಲ್ಲಿ ಶಿಕ್ಷಣ ದಂಧೆಗೆ ಬ್ರೇಕ್ ; ಖಾಸಗಿ ಶಾಲೆಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ರೇಖಾ ಗುಪ್ತಾ

Must read

ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಹಕ್ಕು. ಆದರೆ ಬದಲಾದ ಈ ಕಾಲದಲ್ಲಿ ಹಕ್ಕು ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ಒಂದು ಕಡೆ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಹೆತ್ತವರು ತಮ್ಮ ರಕ್ತ ಬಸಿದು ಹಣ ಗಳಿಸುತ್ತಾರೆ. ಆದರೆ ಮತ್ತೊಂದು ಕಡೆ ಶಿಕ್ಷಣದ ಹೆಸರಿನಲ್ಲಿ ಖಾಸಗಿ ಶಾಲೆಗಳು ಪೋಷಕರ ರಕ್ತ ಹೀರುತ್ತಿವೆ. ಜ್ಞಾನದ ದೇಗುಲವಾಗಬೇಕಿದ್ದ ವಿದ್ಯಾಸಂಸ್ಥೆಗಳು ಇವತ್ತು ಅಪ್ಪಟ ವ್ಯಾಪಾರಿ ಕೇಂದ್ರಗಳಾಗಿ ಬದಲಾಗಿವೆ.

ಈ ಪ್ರೈವೇಟ್ ಸ್ಕೂಲ್ ಮಾಫಿಯಾ ಎಷ್ಟರಮಟ್ಟಿಗೆ ಬೆಳೆದಿದೆ ಅಂದ್ರೆ, ಬರೀ ಡೊನೇಷನ್ ಮತ್ತು ಫೀಸ್ ಅಷ್ಟೇ ಅಲ್ಲದೆ, ಪ್ರತಿಯೊಂದು ಸಣ್ಣ ವಿಚಾರದಲ್ಲೂ ಪೋಷಕರ ಜೇಬಿಗೆ ವ್ಯವಸ್ಥಿತವಾಗಿ ಕತ್ತರಿ ಹಾಕಲಾಗುತ್ತಿದೆ. ಸಮವಸ್ತ್ರದಿಂದ ಹಿಡಿದು ಪೆನ್ಸಿಲ್ ಬಾಕ್ಸ್ ವರೆಗೂ ನಮ್ಮ ಶಾಲೆಯಲ್ಲೇ ತಗೊಳ್ಳಬೇಕು ಅಥವಾ ನಾವು ಹೇಳಿದ ಅಂಗಡಿಯಲ್ಲೇ ಖರೀದಿಸಬೇಕು ಅಂತ ಶಾಲೆಗಳು ಆದೇಶ ಹೊರಡಿಸುತ್ತಿವೆ.
”ಎಜುಫಂಡ್‌” ಸಂಸ್ಥೆ ಪ್ರಕಾರ, 2012-20ರ ಅವಧಿಯಲ್ಲಿ ಶಿಕ್ಷಣ ವೆಚ್ಚದಲ್ಲಿ ಶೇ. 10-12ರಷ್ಟು ಏರಿಕೆಯಾಗಿದೆ. ಖಾಸಗಿ ಶಾಲೆಯವರ ಈ ದರ್ಪಕ್ಕೆ ಈಗ ದೆಹಲಿ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ.

ಹೌದು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಖಾಸಗಿ ಶಾಲೆಗಳ ಸುಲಿಗೆಯ ವಿರುದ್ಧ ಯುದ್ಧ ಸಾರಿದ್ದಾರೆ. ಮಕ್ಕಳಿಗೆ ಬೇಕಾದ ಪುಸ್ತಕ, ಸಮವಸ್ತ್ರ ಮತ್ತು ಲೇಖನ ಸಾಮಗ್ರಿಗಳನ್ನು ಎಲ್ಲಿ ಖರೀದಿಸಬೇಕು ಅನ್ನೋದು ಪೋಷಕರ ಇಚ್ಛೆ. ಅದನ್ನು ಶಾಲೆಗಳು ನಿರ್ಧರಿಸುವಂತಿಲ್ಲ ಅಂತ ಗುಡುಗಿದ್ದಾರೆ. ಒಂದು ವೇಳೆ ಶಾಲೆಗಳು ತಮ್ಮ ಮಾತು ಕೇಳದ ಪೋಷಕರನ್ನು ಅಥವಾ ವಿದ್ಯಾರ್ಥಿಗಳನ್ನು ಒತ್ತಾಯಿಸಿದರೆ, ಅಂತಹ ಶಾಲೆಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಗಳ ಎಚ್ಚರಿಕೆ ಕೇವಲ ಮಾತಿಗೆ ಸೀಮಿತವಾಗಿಲ್ಲ. ನಾನು ದೆಹಲಿಯ ಯಾವುದೇ ಖಾಸಗಿ ಶಾಲೆಗೆ ಯಾವುದೇ ಸಮಯದಲ್ಲಿ ದಿಢೀರ್ ತಪಾಸಣೆಗಾಗಿ ಎಂಟ್ರಿ ಕೊಡಬಲ್ಲೆ ಅಂತ ರೇಖಾ ಗುಪ್ತಾ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಂದು ಶಾಲೆಯ ನೋಟಿಸ್ ಬೋರ್ಡ್, ವೆಬ್‌ಸೈಟ್ ಮತ್ತು ಶಾಲಾ ಅಂಗಡಿಗಳಲ್ಲಿ, ಪೋಷಕರು ತಮಗೆ ಇಷ್ಟ ಬಂದ ಕಡೆ ಸಾಮಗ್ರಿಗಳನ್ನು ಖರೀದಿಸಲು ಮುಕ್ತರಾಗಿದ್ದಾರೆ ಅನ್ನೋದನ್ನು ಲಿಖಿತ ರೂಪದಲ್ಲಿ ಬರೆದು ಹಾಕಬೇಕು ಅಂತ ಆದೇಶಿಸಿದ್ದಾರೆ.

ಅಕಸ್ಮಾತ್ ಯಾವುದಾದರೂ ಶಾಲೆ ಹಠಕ್ಕೆ ಬಿದ್ದು ಒಂದೇ ಮಾರಾಟಗಾರನ ಬಳಿ ವಸ್ತುಗಳನ್ನು ಖರೀದಿಸುವಂತೆ ಒತ್ತಡ ಹೇರಿದರೆ, ಅಂತಹ ಶಾಲೆಯನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯೂ ಇದೆ ಅಂತ ಸಿಎಂ ಬಾಂಬ್ ಸಿಡಿಸಿದ್ದಾರೆ.

ಇತ್ತೀಚೆಗೆ ನಡೆದ ಒಂದು ಅನಿರೀಕ್ಷಿತ ತಪಾಸಣೆಯ ವೇಳೆ ಕೆಲವು ಖಾಸಗಿ ಶಾಲೆಗಳ ಭಯಾನಕ ಮುಖಗಳು ಬಯಲಿಗೆ ಬಂದಿವೆ. ಒಂದು ಕಡೆ ಪುಸ್ತಕಗಳ ಸುಲಿಗೆಯಾದರೆ, ಮತ್ತೊಂದು ಕಡೆ ಸುರಕ್ಷತೆಯೇ ಮರೀಚಿಕೆಯಾಗಿದೆ. ಅಗ್ನಿ ಸುರಕ್ಷತಾ ಪ್ರಮಾಣಪತ್ರವಿಲ್ಲದೆ ಶಾಲೆಗಳು ನಡೆಯುತ್ತಿರುವುದು ಮತ್ತು ಪರವಾನಗಿರಹಿತ ಈಜುಕೊಳಗಳನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಅಂತಹ ಈಜುಕೊಳಗಳನ್ನು ಅಧಿಕಾರಿಗಳು ತಕ್ಷಣವೇ ಸೀಲ್ ಮಾಡಿದ್ದು, ಶಿಕ್ಷಣದ ಹೆಸರಲ್ಲಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸಂಸ್ಥೆಗಳಿಗೆ ಚಳಿ ಬಿಡಿಸಿದ್ದಾರೆ.

ವರ್ಷ ವರ್ಷ ಪುಸ್ತಕಗಳು ಮತ್ತು ಸಮವಸ್ತ್ರಗಳ ಬೆಲೆ ಏರಿಸಿ ಖಾಸಗಿ ಶಾಲೆಗಳು ಪೋಷಕರನ್ನು ಹೈರಾಣು ಮಾಡುತ್ತಿವೆ. ಈ ಖಾಸಗಿ ಶಾಲೆಗಳಿಗೆ ಈಗ ದೆಹಲಿ ಸಿಎಂ ಅವರ ಈ ನಡೆ ನಡುಕ ಹುಟ್ಟಿಸಿದೆ. ಕೇವಲ ಹಣ ಮಾಡುವುದೇ ಉದ್ದೇಶವಾಗಿರುವ ಶಾಲೆಗಳಿಗೆ ಕಾನೂನಿನ ಪಾಠ ಕಲಿಸಲು ಶಿಕ್ಷಣ ನಿರ್ದೇಶನಾಲಯ ಕೂಡ ಸಜ್ಜಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಪ್ರತಿ ವರ್ಷ ಸಾಲ ಮಾಡಿ ಮಕ್ಕಳ ಶಾಲಾ ಸಾಮಗ್ರಿಗಳನ್ನು ಕೊಳ್ಳುತ್ತಿದ್ದ ಸಾವಿರಾರು ಮಧ್ಯಮ ವರ್ಗದ ಪೋಷಕರಿಗೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಂತಾಗಿದೆ.ಮುಂದಿನ ದಿನಗಳಲ್ಲಿ ಸಿಎಂ ರೇಖಾ ಗುಪ್ತಾ ಎಚ್ಚರಿಕೆಗೆ ಹೆದರಿ ಈ ಖಾಸಗಿ ಶಾಲೆಗಳು ದಾರಿಗೆ ಬರ್ತಾವಾ ಅನ್ನೋದನ್ನು ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article