No menu items!
19.4 C
Munich
Friday, May 1, 2026

ಜಮ್ಮು, ಕಾಶ್ಮೀರ್, ಲಡಾಖ್, ಪಾಕಿಸ್ತಾನಕ್ಕೆ ಸೇರಿದ್ದು ಎಂದ ನೇಪಾಳ ಏರ್‌ಲೈನ್ಸ್‌-ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚನೆ

Must read

ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ನಕ್ಷೆಯಲ್ಲಿ ತೋರಿಸಿ ವಿವಾದಕ್ಕೀಡಾದ ನೇಪಾಳ ಏರ್​​​ಲೈನ್ಸ್
ಭಾರತ ಮತ್ತು ನೇಪಾಳದ ನಡುವೆ ಇರುವ ಸಂಬಂಧ ಕೇವಲ ರಾಜ ತಾಂತ್ರಿಕ ಸಂಬಂಧವಲ್ಲ. ಬದಲಿಗೆ ರೋಟಿ-ಬೇಟಿಯ ಸಂಬಂಧ. ಆರ್ಥಿಕ ಪರಾವಲಂಬನೆ.. ಸಾಮಾನ್ಯ ಜೀವನೋಪಾಯ.. ಆಹಾರ.. ವ್ಯಾಪಾರ.. ಇಷ್ಟೇ ಅಲ್ಲ ಕೌಟಂಬಿಕ ಸಂಬಂಧ ಕೂಡ ಇಲ್ಲಿ ಬೆಸೆದಿವೆ. ನೇಪಾಳದ ಇಂಧನ ಅಗತ್ಯಗಳಿಗೆ ಭಾರತ ಪ್ರಮುಖ ಪೂರೈಕೆದಾರವಾಗಿದೆ.

ಇನ್ನು ನೇಪಾಳ ಹಲವು ಬಾರಿ ನಲುಗಿದಾಗ ಸಹಾಯದ ಹಸ್ತ ಚಾಚಿದ್ದು ಬೇರೆ ಯಾರು ಅಲ್ಲ. ಬದಲಿಗೆ ಭಾರತ. ನೇಪಾಳದ ಪಾಲಿಗೆ ಭಾರತ ಯಾವತ್ತು ಕೂಡ ನಂಬಿಕಸ್ಥ ರಾಷ್ಟ್ರ. ಆದರೆ ಅದ್ಯಾಕೋ ಅನ್ನ ತಿಂದ ಮನೆಗೆ ದ್ರೋಹ ಎಸಗುವ ಬುದ್ದಿ ನೇಪಾಳಕ್ಕೆ ಬಂದಂತೆ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ನೇಪಾಳದ ಸರಕಾರಿ ಒಡೆತನದ ವಿಮಾನ ಯಾನ ಸಂಸ್ಥೆ ನೇಪಾಳ ಏರ್‌ಲೈನ್ಸ್‌ ತನ್ನ ವೈಮಾನಿಕ ಜಾಲದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ತಪ್ಪಾಗಿ ತೋರಿಸಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಭಾರತದಲ್ಲ ಬದಲಿಗೆ ಪಾಕಿಸ್ತಾನದ ಪ್ರಾಂತ್ಯಗಳು ಎಂದು ತೋರಿಸುವ ಮಾರ್ಗ ನಕ್ಷೆಯನ್ನು ಹಂಚಿಕೊಂಡಿದೆ.

ನೇಪಾಳದ ಈ ನಕ್ಷೆಯನ್ನು ಕಂಡು ಸಹಜವಾಗಿ ಭಾರತೀಯರ ರಕ್ತ ಕುದ್ದಿದೆ. ಭಾರತದ ಭೂಭಾಗವನ್ನು ಶತ್ರು ರಾಷ್ಟ್ರಕ್ಕೆ ಧಾರೆ ಎರೆದುಕೊಟ್ಟ ನೇಪಾಳದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದೆ. ಈ ಘಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಕ್ಸ್ (ಟ್ವಿಟರ್)ನಲ್ಲಿ #BoycottNepalAirlines ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಲು ಶುರುವಾಗಿದೆ.

ಭಾರತದಿಂದಲೇ ಇಂಧನ, ವಿದ್ಯುತ್ ಮತ್ತು ಲಕ್ಷಾಂತರ ಮಂದಿಗೆ ಉದ್ಯೋಗದ ನೆರವು ಪಡೆಯುವ ನೇಪಾಳ, ಈ ರೀತಿ ಭಾರತದ ಸ್ವಾಭಿಮಾನಕ್ಕೆ ಧಕ್ಕೆ ತಂದಿರೋದನ್ನು ಸಹಿಸಿಕೊಳ್ಳದ ಹಲವರು ಭಾರತ ಸರ್ಕಾರ ನೇಪಾಳದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಬೇಕು ಎಂದು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿವಾದದ ಕಿಚ್ಚು ಹತ್ತುತ್ತಿದ್ದಂತೆಯೇ ಭೋಜ್‌ಪುರಿ ನಟ ಖೇಸರಿಲಾಲ್ ಯಾದವ್ ಸೇರಿದಂತೆ ಹಲವು ಗಣ್ಯರು ನೇಪಾಳ ಏರ್‌ಲೈನ್ಸ್ ನಡೆಯನ್ನು ಖಂಡಿಸಿದ್ದಾರೆ. ಇದು ಕೇವಲ ಲೋಪವಲ್ಲ, ಉದ್ದೇಶಪೂರ್ವಕವಾಗಿ ಭಾರತವನ್ನು ಪ್ರಚೋದಿಸಲು ಮಾಡಿದ ಕೆಲಸ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ವಿಪತ್ತಿನ ಸಮಯದಲ್ಲಿ ಮೊದಲು ಓಡಿ ಬಂದು ಸಹಾಯ ಮಾಡುವ ಭಾರತಕ್ಕೆ ನೇಪಾಳ ಇಂತಹ ಉಡುಗೊರೆ ನೀಡಬೇಕಿತ್ತಾ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ನೇಪಾಳ ಏರ್‌ಲೈನ್ಸ್ ತಕ್ಷಣವೇ ತನ್ನ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೋರಿದೆ. ನಕ್ಷೆಯಲ್ಲಿ ಅಂತರಾಷ್ಟ್ರೀಯ ಗಡಿಗಳನ್ನು ಗುರುತಿಸುವಲ್ಲಿ ಲೋಪವಾಗಿದೆ. ಇದು ನಮ್ಮ ಅಧಿಕೃತ ನಿಲುವಲ್ಲ ಎಂದು ಸಂಸ್ಥೆ ಕೈಮುಗಿದಿದೆ. ತಾಂತ್ರಿಕ ತಪ್ಪಿನಿಂದ ಈ ಎಡವಟ್ಟು ನಡೆದಿದೆ ಎಂದು ಹೇಳಿಕೊಂಡಿದ್ದರೂ, ಇಂತಹ ಗಂಭೀರ ವಿಷಯದಲ್ಲಿ ಸರ್ಕಾರಿ ಸಂಸ್ಥೆಯೊಂದು ಇಷ್ಟೊಂದು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದು ಹೇಗೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ.

- Advertisement -spot_img

More articles

- Advertisement -spot_img

Latest article