No menu items!
13.5 C
Munich
Saturday, July 25, 2026

‘ನೀಟ್’ ಲಫಡಾ ಮಧ್ಯೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಚರಿತ್ರೆ ಬರೆದ ಪ್ರಧಾನಿ ಮೋದಿ

Must read

ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ (NEET) ಪೇಪರ್ ಲೀಕ್ ಖಂಡಿಸಿ ವಿದ್ಯಾರ್ಥಿಗಳು ಮತ್ತು ಯುವಜನತೆ ನಡೆಸುತ್ತಿರುವ ಹೋರಾಟ ತಾರಕಕ್ಕೇರಿರುವ ಬೆನ್ನಲ್ಲೇ, ದೇಶದ ಯುವ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದ ವಿಡಿಯೋ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಮಧ್ಯರಾತ್ರಿ ಹಂಚಿಕೊಂಡ ವಿಡಿಯೋಗೆ ದೇಶದ ಯುವಜನತೆಯಿಂದ ವ್ಯಕ್ತವಾದ ಅಭೂತಪೂರ್ವ ಸ್ಪಂದನೆಯಿಂದಾಗಿ ಪುಳಕಿತಗೊಂಡಿರುವ ಪ್ರಧಾನಿ, ಇದೀಗ ಶುಕ್ರವಾರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ “ಧನ್ಯವಾದ ಗೆಳೆಯರೇ” ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಥ್ಯಾಂಕ್ಯೂ ಫ್ರೆಂಡ್ಸ್ : ಮತ್ತೊಂದು ವಿಡಿಯೋ ಮೂಲಕ ಪ್ರಧಾನಿ ಧನ್ಯವಾದ

ಶುಕ್ರವಾರ (ಜುಲೈ 24) ಬಿಡುಗಡೆ ಮಾಡಿದ ಹೊಸ ವಿಡಿಯೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಥ್ಯಾಂಕ್ಯೂ ಫ್ರೆಂಡ್ಸ್, ನಿನ್ನೆ ರಾತ್ರಿ ನಿಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಅವಕಾಶ ನನಗೆ ಸಿಕ್ಕಿತು. ನಾನು ಪೋಸ್ಟ್ ಮಾಡಿದ ವಿಡಿಯೋಗೆ ನೀವು ನೀಡಿದ ಅಭೂತಪೂರ್ವ ಪ್ರತಿಕ್ರಿಯೆ ಹಾಗೂ ಸಕಾರಾತ್ಮಕ ಸಲಹೆಗಳಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿ ಹೀಗೆಯೇ ಮುಂದುವರಿಯಲಿ, ನಿಮ್ಮ ಮತ್ತು ನಮ್ಮ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ. ಥ್ಯಾಂಕ್ ಯೂ ಫ್ರೆಂಡ್ಸ್ ಎಂದು ದೇಶದ ಯುವಜನತೆಯನ್ನು ಉದ್ದೇಶಿಸಿ ಮೆಸೇಜ್ ರವಾನಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚರಿತ್ರೆ: 24 ಗಂಟೆಯಲ್ಲಿ 303 ಮಿಲಿಯನ್ ವೀವ್ಸ್

ವಿಶೇಷವೆಂದರೆ, ಗುರುವಾರ (ಜುಲೈ 23) ರಾತ್ರಿ 11.52ಕ್ಕೆ ಪ್ರಧಾನಿ ಮೋದಿ ಪೋಸ್ಟ್ ಮಾಡಿದ ಸುಮಾರು 3 ನಿಮಿಷಗಳ ವಿಡಿಯೋ ಇನ್ಸ್ಟಾಗ್ರಾಮ್ ಮತ್ತು ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಹಳೆಯ ಎಲ್ಲಾ ಸಾರ್ವಕಾಲಿಕ ದಾಖಲೆಗಳನ್ನು ಧೂಳೀಪಟ ಮಾಡಿದೆ. ವಿಡಿಯೋ ಅಪ್‌ಲೋಡ್ ಆದ ಕೇವಲ 8 ನಿಮಿಷಗಳಲ್ಲೇ 25 ಲಕ್ಷಕ್ಕೂ ಹೆಚ್ಚು (2.5 Million) ವೀಕ್ಷಣೆ ಪಡೆದುಕೊಂಡಿತ್ತು. ಇನ್ನು 20 ನಿಮಿಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡು ದಾಖಲೆ ಬರೆದಿತ್ತು. 24 ಗಂಟೆಗಳಲ್ಲಿ ಭರ್ಜರಿ 303 ಮಿಲಿಯನ್ ವೀವ್ಸ್ ಪಡೆಯುವ ಮೂಲಕ ಇನ್ಸ್ಟಾಗ್ರಾಮ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೇ ರಾತ್ರಿಯಲ್ಲಿ ಮೋದಿಯವರ ಇನ್ಸ್ಟಾಗ್ರಾಮ್ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿರೋದು ಮತ್ತೊಂದು ವಿಶೇಷ.

ಪೇಪರ್ ಲೀಕ್ ಕಿರಿಕ್‌ಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್, ಕಠಿಣ ಶಿಕ್ಷೆಯ ಕಾನೂನು

ತಮ್ಮ ಮೊದಲ ತಡರಾತ್ರಿಯ ವಿಡಿಯೋದಲ್ಲಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಆತಂಕಕ್ಕೆ ಧೈರ್ಯ ತುಂಬಿದ್ದ ಪ್ರಧಾನಿ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ಪ್ರಸ್ತಾಪಿಸಿದ್ದರು. ಇಂತಹ ಪೇಪರ್ ಲೀಕ್ ದಂಧೆಗೆ ಕಠಿಣ ಶಿಕ್ಷೆ ವಿಧಿಸುವ ಕರಡು ಕಾಯಿದೆ ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದಿದ್ದರು. ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲೇ ಈ ಕರಡು ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಸಕಲ ಪ್ರಯತ್ನ ನಡೆಸಲಿದೆ ಎಂದು ಭರವಸೆ ನೀಡಿದ್ದರು.

ಇದು ಸಣ್ಣ ವಿಷಯವಲ್ಲ, ಹೆತ್ತವರ ನೋವು ನನಗೆ ಅರ್ಥವಾಗುತ್ತೆ

ವಿಡಿಯೋದಲ್ಲಿ ಪೇಪರ್ ಲೀಕ್ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ನಿಲುವು ವ್ಯಕ್ತಪಡಿಸಿದ್ದ ಪ್ರಧಾನಿ, “ಪ್ರಶ್ನೆ ಪತ್ರಿಕೆ ಸೋರಿಕೆ ಎನ್ನುವುದು ಅತ್ಯಂತ ಗಂಭೀರವಾದ ವಿಚಾರ. ಇದು ಸಣ್ಣ ವಿಷಯವಲ್ಲವೇ ಅಲ್ಲ. ಹಗಲಿರುಳು ಶ್ರಮಿಸಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯಕ್ಕಾಗಿ ಕನಸು ಕಾಣುವ ಪೋಷಕರಿಗೆ ಇದು ಅಪಾರ ನೋವನ್ನುಂಟು ಮಾಡಿದೆ” ಎಂದು ಕಳವಳ ವ್ಯಕ್ತಪಡಿಸಿದ್ದರು. ಯಾವೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ವರ್ಷ ಹಾಳಾಗದಂತೆ ನೋಡಿಕೊಳ್ಳುವುದೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಇಂತಹ ದಂಧಕೋರರನ್ನು ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ ಎಂದಿದ್ದರು.

ಸಂಪುಟ ಸಹೋದ್ಯೋಗಿಗಳಿಗೆ ಕ್ಲಾಸ್: ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿ

ಇದೇ ವೇಳೆ, ಸೋಶಿಯಲ್ ಮೀಡಿಯಾ ಮೂಲಕ ಯುವಜನತೆಗೆ ನೇರವಾಗಿ ತಲುಪಿದ ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಪ್ರಧಾನಿ ಮೋದಿ ತಮ್ಮ ಸಂಪುಟದ ಸಚಿವರಿಗೂ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ನಿಮ್ಮಲ್ಲಿ ಎಷ್ಟು ಮಂದಿ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾಗಳನ್ನು ಸಕ್ರಿಯವಾಗಿ ಬಳಸುತ್ತಿದ್ದೀರಾ? ಎಂದು ಸಚಿವರನ್ನು ಪ್ರಧಾನಿ ಪ್ರಶ್ನಿಸಿದ್ದಾರೆ. ದೇಶದ ಹೆಚ್ಚಿನ ಯುವಜನತೆ ಇನ್‌ಸ್ಟಾಗ್ರಾಮ್‌ನಲ್ಲಿ ಸಮಯ ಕಳೆಯುತ್ತಿರುವುದರಿಂದ, ಯುವ ಸಮುದಾಯಕ್ಕೆ ಸರ್ಕಾರದ ಯೋಜನೆಗಳು ಹಾಗೂ ನಿರ್ಧಾರಗಳನ್ನು ನೇರವಾಗಿ ತಲುಪಿಸಲು ಪ್ರತಿಯೊಬ್ಬ ಸಚಿವರೂ ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.

ವಿದ್ಯಾರ್ಥಿ ಪ್ರತಿಭಟನೆ ಮತ್ತು ಪ್ರಧಾನಿ ‘ಡಿಜಿಟಲ್’ ಮಾಸ್ಟರ್ ಪ್ಲಾನ್

ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದು, ಪ್ರತಿಭಟನೆಯಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ನುಸುಳಿ ಹಿಂಸಾಚಾರಕ್ಕೆ ಯತ್ನಿಸುತ್ತಿವೆ ಎಂಬ ವರದಿಗಳ ಮಧ್ಯೆಯೂ ಪ್ರಧಾನಿ ಮೋದಿಯವರ ಈ ತಡರಾತ್ರಿಯ ಡಿಜಿಟಲ್ ಹೆಜ್ಜೆ ಯುವಜನತೆಯ ಗಮನ ಸೆಳೆದಿದೆ. ಯುವ ಸಮುದಾಯದ ಆಕ್ರೋಶವನ್ನು ತಣಿಸಲು ಮತ್ತು ಅವರೊಂದಿಗೆ ನೇರ ಬಾಂಧವ್ಯ ಬೆಳೆಸಲು ಪ್ರಧಾನಿ ಹಂಚಿಕೊಂಡ ವಿಡಿಯೋ ಸಂದೇಶ ಮತ್ತು ಅವರಿಗೆ ಸಿಕ್ಕಿದ 303 ಮಿಲಿಯನ್ ವೀವ್ಸ್ ದಾಖಲೆ, ಭಾರತದ ರಾಜಕೀಯ ಮತ್ತು ಡಿಜಿಟಲ್ ಕಮ್ಯುನಿಕೇಶನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾದಿಮಾಡಿಕೊಟ್ಟಿದೆ.

- Advertisement -spot_img

More articles

- Advertisement -spot_img

Latest article