ಬಿಎಸ್ ವೈ ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ್ ಪ್ರಕಾಶ್ ಇನ್ನಿಲ್ಲ

0
29

ಬೆಂಗಳೂರು (ಮೇ. 14) : ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್​ ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಅವರು, ಹೃದಯ ಸಂಬಂಧಿ ಕಾಯಿಲೆ ಕಾರಣ ನಾರಾಯಣ ಹೃದಯಾಲಯಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪತ್ರಿಕಾ ರಂಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ‘ಈ ಭಾನುವಾರ’ ಎಂಬ ಪತ್ರಿಕೆ ಸಂಪಾದಕರಾಗಿದ್ದರು. ಅಂಕಣಕಾರರು, ರಾಜಕೀಯ ವಿಶ್ಲೇಷಕರಾಗಿ ಕೂಡ ಗುರುತಿಸಿಕೊಂಡಿದ್ದರು. ಜೊತೆಗೆ ಮಾಹಿತಿ ಮತ್ತು ಪ್ರಚಾರ ಇಲಾಖೆಯಲ್ಲಿ ಮಾಹಿತಿ ಸಹಾಯಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಮಹದೇವ ಪ್ರಕಾಶ್​ ಅವರ ಸಾವಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಕೂಡ ಸಂತಾಪ ಸೂಚಿಸಿದ್ದಾರೆ. ಖ್ಯಾತ ಲೇಖಕ, ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಅವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ನನ್ನ ಮಾಧ್ಯಮ ಸಲಹೆಗಾರರಾಗಿಯೂ ಅವರು ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ

ಮಹದೇವ ಪ್ರಕಾಶ್​ ಅವರು, 1975ರಲ್ಲಿ ಮಾಜಿ ಸಿಎಂ ವಿರೇಂದ್ರ ಪಾಟೀಲರು ಆರಂಭಿಸಿದ್ದ ‘ಲೋಕವಾಣಿ’ ಎಂಬ ದಿನ ಪತ್ರಿಕೆ ಮೂಲಕ ಪತ್ರಿಕೋದ್ಯಮ ಆರಂಭಿಸಿದ್ದರು. ಬಳಿಕ ‘ಈ ಭಾನುವಾರ’ ಎಂಬ ನಿಯತ ಕಾಲಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ‘ಹೊರಳು ನೋಟ’ ಎಂಬ ಅಂಕಣದ ಮೂಲಕ ಪ್ರಸ್ತುತ ರಾಜಕೀಯ ಘಟನೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದರು.’ಸದನದಲ್ಲಿ ದೇವರಾಜ ಅರಸು’ ಎಂಬ ಕೃತಿಯನ್ನು ಅವರು ರಚಿಸಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಒಂದು ವರ್ಷ ಆಡಳಿತ ಕುರಿತು ‘ದಣಿವರಿಯದ ಧೀಮಂತ’ ಎಂಬ ಹೊತ್ತಿಗೆ ಹೊರ ತಂದಿದ್ದರು. ‘ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರಾಗಿದ್ದ ಇವರು ಈ ಸಿಎಂ ಮಾಧ್ಯಮ ಸಲಹೆಗಾರಾಗಿರುವ ಹಿನ್ನಲೆ ಲಾಬಿ ಮಾಡಿ ಈ ಪ್ರಶಸ್ತಿ ಪಡೆದ ಎಂಬಂತಾಗುತ್ತದೆ. ಈ ರೀತಿಯ ಅಭಿಪ್ರಾಯ ಸಾರ್ವಜನಿಕವಲಯದಲ್ಲಿ ಮೂಡಬಾರದು ಎಂದು ಪ್ರಶಸ್ತಿಯನ್ನು ನಿರಾಕರಿಸಿದ್ದರು. ಇದಾದ ಕೆಲ ತಿಂಗಳ ಬಳಿಕ ಅವರು ಸಿಎಂ ಮಾಧ್ಯಮ ಸಲಹೆಗಾರರ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ​

LEAVE A REPLY

Please enter your comment!
Please enter your name here