ಬೆಂಗಳೂರಿನಲ್ಲಿ ಸೈಟು, ಮನೆ ಹೊಂದಿರೋ ಆಸ್ತಿ ಮಾಲೀಕರಿಗೆ ಸರ್ಕಾರ ಕೊನೆಗೂ ಒಂದು ಬ್ರೇಕಿಂಗ್ ಗುಡ್ ನ್ಯೂಸ್ ಕೊಟ್ಟಿದೆ! ಖಾತೆ ಮಾಡಿಸೋಕೆ ಬಿಬಿಎಂಪಿ ಆಫೀಸ್ ಸುತ್ತಿ ಸುತ್ತಿ, ಕೆಳಮಟ್ಟದ ಅಧಿಕಾರಿಗಳ ಲಂಚದ ಕಾಟಕ್ಕೆ ಬೇಸತ್ತಿದ್ದ ಜನರಿಗೆ ಈಗ ದೊಡ್ಡ ರಿಲೀಫ್ ಸಿಕ್ಕಿದೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು “ನನ್ನ ಇ-ಖಾತಾ, ನನ್ನ ಹಕ್ಕು” ಅನ್ನೋ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇನ್ಮುಂದೆ ಒಂದೇ ಒಂದು ರೂಪಾಯಿ ಲಂಚ ಕೊಡದೆ, ಯಾವುದೇ ದಲ್ಲಾಳಿಗಳ ಹಂಗಿಲ್ಲದೆ ನಿಮ್ಮ ಬಿ-ಖಾತೆ ಆಸ್ತಿಗಳನ್ನು ಎ-ಖಾತೆಗೆ ಪರಿವರ್ತನೆ ಮಾಡಿಕೊಳ್ಳಬಹುದು ಎಂದಿದ್ಧಾರೆ.
ಈ ಅಭಿಯಾನಕ್ಕೆ ಬೆಂಗಳೂರು ಪೂರ್ವ ವಲಯದ ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಚಾಲನೆ ನೀಡಿ, ಇಡೀ ಪ್ರಕ್ರಿಯೆಯನ್ನ ಖುದ್ದಾಗಿ ಪರಿಶೀಲಿಸಿದ್ದಾರೆ. ಬೆಂಗಳೂರಿನ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಇದು ಬರೀ ಆಶ್ವಾಸನೆಯಲ್ಲ, ಸಾರ್ವಜನಿಕರ ಹಕ್ಕು ಎಂದು ಘೋಷಿಸಿದ್ದಾರೆ. ಇನ್ಮುಂದೆ ಪ್ರತಿ ಶನಿವಾರ ಈ ವಿಶೇಷ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ನೇರವಾಗಿ ಬಂದು ತಮ್ಮ ಇ-ಖಾತೆಯನ್ನ ಪಡೆದುಕೊಳ್ಳಬಹುದಾಗಿದೆ.
ರಾಜಧಾನಿಯಲ್ಲಿರೋ ಒಟ್ಟು 23 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 16 ಲಕ್ಷ ಆಸ್ತಿಗಳು ಎ-ಖಾತೆ ಹೊಂದಿವೆ. ಆದರೆ, ಬರೋಬ್ಬರಿ 7 ಲಕ್ಷ ಆಸ್ತಿಗಳು ಇಂದಿಗೂ ಬಿ-ಖಾತೆಯಲ್ಲೇ ಉಳಿದುಕೊಂಡಿವೆ. ಈ ಬಿ-ಖಾತೆ ಆಸ್ತಿಗಳನ್ನ ಇಟ್ಟುಕೊಂಡು ಬ್ಯಾಂಕ್‌ಗಳಲ್ಲಿ ಲೋನ್ ಸಿಗದೆ, ಆಸ್ತಿ ಮೌಲ್ಯವೂ ಹೆಚ್ಚಾಗದೆ ಜನ ಒದ್ದಾಡುತ್ತಿದ್ದರು. ಈಗ ಈ 7 ಲಕ್ಷ ಜನರಿಗೆ ನೇರ ಲಾಭ ಸಿಗಲಿದ್ದು, ಬಿ-ಖಾತೆಯಿಂದ ಎ-ಖಾತೆಗೆ ಬದಲಾದ ತಕ್ಷಣ ಆಸ್ತಿಯ ಅಸಲಿ ಬೆಲೆ ದುಪ್ಪಟ್ಟಾಗೋದು ಗ್ಯಾರಂಟಿ.
ಸರ್ಕಾರ ಈ ವ್ಯವಸ್ಥೆಯನ್ನ ಎಷ್ಟು ಸ್ಟ್ರಾಂಗ್ ಆಗಿ ಮಾಡಿದೆ ಅಂದ್ರೆ, ಇನ್ಮುಂದೆ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸೋ ಆಟ ನಡೆಯಲ್ಲ. ಹೊಸ ಇ-ಖಾತೆಯಲ್ಲಿ ಮಾಲೀಕರ ಫೋಟೋ ಮಾತ್ರವಲ್ಲ, ಆ ಮನೆಯ ಫೋಟೋ ಕೂಡ ಇರಲಿದೆ! 2004ರ ನಂತರದ ಎಲ್ಲಾ ಆಸ್ತಿ ದಾಖಲೆಗಳನ್ನ ನೇರವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲಿಂಕ್ ಮಾಡಲಾಗಿದ್ದು, ಯುನಿಕ್ ಐಡಿ ನಂಬರ್ ಹಾಕಿದ ತಕ್ಷಣ ಅಸಲಿ ಮಾಹಿತಿ ಹೊರಬರಲಿದೆ. ಒಂದು ವೇಳೆ ಯಾರಾದರೂ ಫೇಕ್ ಡಾಕ್ಯುಮೆಂಟ್ ಕೊಟ್ಟು ಖಾತೆ ಮಾಡಿಸಿಕೊಂಡರೆ, ತಕ್ಷಣವೇ ಅದನ್ನ ರದ್ದು ಮಾಡುವ ಕಠಿಣ ಸಿಸ್ಟಮ್ ಕೂಡ ರೆಡಿಯಾಗಿದೆ.
ಇನ್ನು ಆಸ್ತಿ ಮಾಲೀಕರಿಗೆ ಬಿಗ್ ಆಫರ್ ಒಂದನ್ನ ಸರ್ಕಾರ ಅನೌನ್ಸ್ ಮಾಡಿದೆ. ನಿಯಮದ ಪ್ರಕಾರ ಬಿ-ಖಾತೆಯಿಂದ ಎ-ಖಾತೆಗೆ ಬದಲಾಯಿಸಲು ಆಸ್ತಿ ಮೌಲ್ಯದ ಶೇ. 5 ರಷ್ಟು ಶುಲ್ಕ ಪಾವತಿಸಬೇಕಿತ್ತು. ಆದರೆ ಈ ಯೋಜನೆಯಡಿ ಮೊದಲ 100 ದಿನಗಳ ಕಾಲ ಬಂಪರ್ ರಿಯಾಯಿತಿ ಘೋಷಿಸಲಾಗಿದ್ದು, ಸಾರ್ವಜನಿಕರು ಕೇವಲ ಶೇ. 2 ರಷ್ಟು ಶುಲ್ಕ ಪಾವತಿಸಿ ತಮ್ಮ ಖಾತೆಯನ್ನ ಬದಲಾಯಿಸಿಕೊಳ್ಳಬಹುದು. ನಿಮ್ಮ ದಾಖಲೆಗಳಲ್ಲಿ ಏನಾದರೂ ಸಣ್ಣಪುಟ್ಟ ತೊಂದರೆಗಳಿದ್ದರೆ, ಅಧಿಕಾರಿಗಳೇ ಖುದ್ದಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸರಿಪಡಿಸಿಕೊಡಲಿದ್ದಾರೆ.
ಅಧಿಕಾರಿಗಳಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷದವರಾಗಲಿ ಖಾತೆ ಮಾಡಿಕೊಡಲು ದುಡ್ಡು ಕೇಳಿದರೆ ಸೀದಾ ಕಂಪ್ಲೇಂಟ್ ಮಾಡಿ ಅಂತ ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ದಲ್ಲಾಳಿಗಳನ್ನ ಸಂಪೂರ್ಣವಾಗಿ ದೂರ ಇಡಲು ಸರ್ಕಾರ ಪ್ರತ್ಯೇಕ ಹೆಲ್ಪ್‌ಲೈನ್ ಮತ್ತು ದೂರವಾಣಿ ಸಂಖ್ಯೆಯನ್ನ ಬಿಡುಗಡೆ ಮಾಡ್ತಿದೆ. ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಗ್ಯಾರಂಟಿ ಎಂದಿರೋ ಅವರು, ಸಾರ್ವಜನಿಕರು ನೇರವಾಗಿ ಆನ್‌ಲೈನ್ ಮೂಲಕವೂ ತಮ್ಮ ಡಿಜಿಟಲ್ ಇ-ಖಾತೆಯನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ನಂತರ ಈಗ ಆರನೇ ಗ್ಯಾರಂಟಿಯಾಗಿ “ಭೂಮಿ ಗ್ಯಾರಂಟಿ”ಯನ್ನ ಬೆಂಗಳೂರಿಗರಿಗೆ ತಂದಿಟ್ಟಿದೆ. ಜನಸಾಮಾನ್ಯರಿಗೆ ಮನೆ ಬಾಗಿಲಿಗೆ, ಲಂಚವಿಲ್ಲದೆ ಸಿಗುತ್ತಿರುವ ಈ ಸೌಲಭ್ಯ ನಿಜಕ್ಕೂ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಹೊಸ ಸಂಚಲನ ಮೂಡಿಸಲಿದೆ. ನಿಮ್ಮದೂ ಬಿ-ಖಾತೆ ಆಸ್ತಿ ಇದ್ದರೆ, ತಡ ಮಾಡದೆ ಈ 100 ದಿನಗಳ ಸುವರ್ಣಾವಕಾಶವನ್ನ ಬಳಸಿಕೊಳ್ಳಿ.



