ಬೆಂಗಳೂರು ಕೋಟ್ಯಂತರ ಜನರಿಗೆ ಬದುಕು ಕೊಟ್ಟ ಊರು. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಉದ್ಯೋಗ ಅರಸಿ ಬರುವವರಿಗೆ ತನ್ನಲ್ಲಿ ಆಶ್ರಯ ನೀಡಿ ಸಲುಹುತ್ತಿರುವ ಊರು. ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ , ಗಾರ್ಡನ್ ಸಿಟಿ ಎಂದೆಲ್ಲಾ ಕರೆಯಿಸಿಕೊಳ್ಳುವ ಬೆಂಗಳೂರು ವಿಸ್ತೀರ್ಣದಲ್ಲಿಯೂ ಕೂಡ ಅತಿದೊಡ್ಡ ಊರು.
ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಪುರಾತನ ದೇವಾಲಯಗಳು, ಮಾರುಕಟ್ಟೆಗಳು, ಉದ್ಯಾನವನಗಳು, ಪ್ರಸಿದ್ಧ ಕಟ್ಟಡಗಳು ಹೀಗೆ ನಗರದ ಮೂಲೆ ಮೂಲೆಯಲ್ಲೂ ನೋಡಬಹುದಾದ ಸ್ಥಳಗಳಿವೆ. ಹಾಗೆಯೇ ಮೂಲೆ ಮೂಲೆಯಲ್ಲಿಯೂ ಅಣಬೆಯಂತೆ ಪಿಜಿಗಳು ತಲೆ ಎತ್ತಿವೆ. ಆದರೆ ಹೀಗೆ ತಲೆ ಎತ್ತಿರುವ ಈ ಪಿಜಿಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮತ್ತು ಆತಂಕ ಈಗ ಮತ್ತೆ ಕಾಡುತ್ತಿದೆ. ಯಾಕೆಂದರೆ ನಿನ್ನೆ (ಏಪ್ರಿಲ್ 27) ಇಡೀ ಬೆಂಗಳೂರು ನಿದ್ದೆಗೆ ಜಾರಿದ್ದಾಗ, ಪಿಜಿಯಲ್ಲಿದ್ದ 50 ಯುವತಿಯರು ಸಾವಿನ ಜೊತೆ ಅಕ್ಷರಶಃ ಹೋರಾಡಿದ್ದಾರೆ.
ಹೌದು, ನಿನ್ನೆ(ಏಪ್ರಿಲ್ 27) ಮಧ್ಯರಾತ್ರಿ ಸುಮಾರು 12:40ರ ಸಮಯ. ನಂದಿನಿ ಲೇಔಟ್‌ನ ಲೇಡಿಸ್ ಪಿಜಿಯಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಆದರೆ ಪಕ್ಕದಲ್ಲೇ ಇದ್ದ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಇಡೀ ಚಿತ್ರಣವನ್ನೇ ಬದಲಿಸಿಬಿಡ್ತು. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಪಿಜಿ ಕಟ್ಟಡವನ್ನು ಆವರಿಸಿಕೊಂಡಿತು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಇಡೀ ಕಟ್ಟಡ ದಟ್ಟವಾದ ಕಪ್ಪು ಹೊಗೆಯಿಂದ ತುಂಬಿಹೋಗಿತ್ತು.
ಯೋಚನೆ ಮಾಡಿ, ನಾಲ್ಕು ಅಂತಸ್ತಿನ ಕಟ್ಟಡ, ಹೊರಬರೋಕೆ ದಾರಿಯಿಲ್ಲ, ಅತ್ತ ಉಸಿರುಗಟ್ಟಿಸೋ ಹೊಗೆ, ಇತ್ತ ಸುಡೋ ಬೆಂಕಿ. ಆ ಯುವತಿಯರ ಪರಿಸ್ಥಿತಿ ಹೇಗಾಗಿರಬೇಡ? ಜೀವನದ ಬಗ್ಗೆ ಆಸೆಯನ್ನೇ ಬಿಟ್ಟಿದ್ದ ಆ ಯುವತಿಯರ ಎದುರು ಕಟ್ಟಡದಿಂದ ಕೆಳಕ್ಕೆ ಜಿಗಿಯೋದು ಬಿಟ್ರೆ ಬೇರೆ ದಾರಿ ಇರಲಿಲ್ಲ.
ಹೀಗಾಗಿ ಪ್ರಾಣ ಉಳಿಸಿಕೊಳ್ಳಲು ಬಾಲ್ಕನಿ, ಮತ್ತು ಕಾಂಪೌಂಡ್‌ನಿಂದ ಯುವತಿಯರು ಒಬ್ಬೊಬ್ಬರಾಗಿ ಕೆಳಕ್ಕೆ ಜಿಗಿದಿದ್ದಾರೆ. ಸದ್ಯ ಈ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಿದ್ರೆ ಮೈ ಜುಂ ಎನ್ನುವಂತಿವೆ.
ಸುತ್ತಮುತ್ತಲ ಜನ ತಕ್ಷಣವೇ ಎಚ್ಚೆತ್ತುಕೊಂಡು ಯುವತಿಯರ ನೆರವಿಗೆ ಧಾವಿಸದಿದ್ದರೆ ಇಂದು ಯಾವುದೋ ದೊಡ್ಡ ದುರಂತಕ್ಕೆ ಬೆಂಗಳೂರು ಸಾಕ್ಷಿಯಾಗಬೇಕಿತ್ತು. ಸ್ಥಳೀಯರ ಸಮಯಪ್ರಜ್ಞೆ ಮತ್ತು ಯುವತಿಯರ ಧೈರ್ಯದಿಂದಾಗಿ ಕಟ್ಟಡದಲ್ಲಿದ್ದ ಎಲ್ಲ 50 ಯುವತಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಡೆ ಹಾರಿ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತು ಕೆಳಕ್ಕೆ ಜಿಗಿದ ರಭಸಕ್ಕೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದು ಕೇವಲ ಒಂದು ಆಕಸ್ಮಿಕ ಬೆಂಕಿ ಅವಘಡವೋ ಅಥವಾ ಪಿಜಿ ಕಟ್ಟಡದ ನಿರ್ಮಾಣದಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿದೆಯೇ ಅನ್ನೋ ಪ್ರಶ್ನೆ ಈಗ ಎದ್ದಿದೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿರೋ ಇಂತಹ ಪಿಜಿಗಳಲ್ಲಿ ಕನಿಷ್ಠ ಪಕ್ಷ ಬೆಂಕಿ ನಂದಿಸೋ ಸೌಲಭ್ಯಗಳೂ ಇರೋದಿಲ್ಲ ಅನ್ನೋದು ಕಹಿ ಸತ್ಯ. ಒಟ್ಟಿನಲ್ಲಿ, ಕೂದಲೆಳೆ ಅಂತರದಲ್ಲಿ 50 ಜೀವಗಳು ಉಳಿದಿವೆ. ಆದರೆ ಈ ಘಟನೆ ಬೆಂಗಳೂರಿನ ಪಿಜಿ ಮಾಲೀಕರಿಗೆ ಮತ್ತು ಪಾಲಿಕೆಗೆ ಒಂದು ದೊಡ್ಡ ಎಚ್ಚರಿಕೆ ಗಂಟೆ.



