ಭೀಕರ ರಸ್ತೆ ಅಪಘಾತ : ರಾಯರ ದರ್ಶನಕ್ಕೆಂದು ತೆರಳಿದ್ದ 8 ಮಂದಿ ಭಕ್ತರ ಸಾವು!
ಕರ್ನೂಲ್: ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಗೂಡ್ಸ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕದ 8 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋನ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಚಿಕ್ಕಮಗಳೂರಿನಿಂದ ಮಂತ್ರಾಲಯಕ್ಕೆ ರಾಯರ ದರ್ಶನಕ್ಕಾಗಿ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ಗೂಡ್ಸ್ ವಾಹನ ಮತ್ತು ಬೀದರ್ನಿಂದ ತುಮಕೂರಿಗೆ ಸಾಗುತ್ತಿದ್ದ ಫ್ಲೈಆಶ್ ಲಾರಿ ನಡುವೆ ಬೆಳಗ್ಗೆ ಸುಮಾರು 4 ಗಂಟೆ ವೇಳೆಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಮತ್ತು ಮೀನಾಕ್ಷಿ ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಮೂರು ವರ್ಷದ ಮಗು ಸೇರಿದೆ.
ಇನ್ನೂ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಷ್ಟು ನಾಲ್ವರು ಎಮ್ಮಿಗನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಸುಮಾರು 18 ಮಂದಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಗೂಡ್ಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ.
ಘಟನಾ ಸ್ಥಳಕ್ಕೆ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಮಂತ್ರಾಲಯ ಪೊಲೀಸ್ ಠಾಣೆನಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.



