No menu items!
36.1 C
Munich
Monday, August 3, 2026

ಮಂತ್ರಿಗಿರಿ ಕನಸು ನನಸು ; ವಿಧಾನಸೌಧ ಪ್ರವೇಶಿಸಲಿರುವ ಧರ್ಮಸಿಂಗ್ ವಾರಸ್ದಾರ- ತಾಯಿ ಭಾವುಕ

Must read

ಕರ್ನಾಟಕ ರಾಜಕಾರಣದಲ್ಲಿ ಈಗ ಎಲ್ಲೆಡೆ ಒಂದು ಹೆಸರೇ ಗುಂಯ್ಗುಡುತ್ತಿದೆ, ಅದೇ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್. ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಅಜಾತಶತ್ರುವಾಗಿ ಮೆರೆದಿದ್ದ ಮಾಜಿ ಸಿಎಂ ದಿವಂಗತ ಎನ್. ಧರ್ಮಸಿಂಗ್ ಅವರ ಮನೆಯಲ್ಲಿ ಈಗ ಹಬ್ಬದ ವಾತಾವರಣ. ಅಜಯ್ ಸಿಂಗ್ ಕೊನೆಗೂ ಸಚಿವ ಸಂಪುಟ ಸೇರುತ್ತಿದ್ದು, ಅವರ ರಾಜಕೀಯ ಪಯಣದಲ್ಲಿ ಇದು ಹೊಸ ಮೈಲಿಗಲ್ಲು.

ಸಂಪುಟದಲ್ಲಿ ಅಜಯ್ ಸಿಂಗ್ ಅವರಿಗೆ ಸ್ಥಾನ ಸಿಕ್ಕ ಅಧಿಕೃತ ಸುದ್ದಿ ಹೊರಬರುತ್ತಿದ್ದಂತೆಯೇ, ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಬೆಂಬಲಿಗರು ಜಮಾಯಿಸಿದರು. ಇವರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ, ತಮ್ಮ ನೆಚ್ಚಿನ ನಾಯಕನನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದರು.

ಈ ದಿಢೀರ್ ಸಂಭ್ರಮದ ನಡುವೆಯೂ ಅಲ್ಲಿ ಭಾವನಾತ್ಮಕವಾದ ವಾತಾವರಣ ನಿರ್ಮಾಣವಾಗಿತ್ತು . ಮಗ ಮಂತ್ರಿಯಾಗುತ್ತಿರುವ ಶುಭ ಸುದ್ದಿಯನ್ನು ಕೇಳಿ ತಾಯಿ ಪ್ರಭಾವತಿ ಧರ್ಮಸಿಂಗ್ ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಉಕ್ಕಿ ಹರಿಯಿತು. ಮಗನನ್ನು ಪ್ರೀತಿಯಿಂದ ತಬ್ಬಿಕೊಂಡು ಕಣ್ಣೀರಿಟ್ಟ ಆ ತಾಯಿಯ ವಾತ್ಸಲ್ಯ ಅಲ್ಲಿ ಸೇರಿದ್ದವರ ಮನ ಮುಟ್ಟಿತು. ಅಜಯ್ ಸಿಂಗ್ ಕೂಡ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ದೃಶ್ಯ ಮನಕಲಕುವಂತಿತ್ತು.
ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ ಅಜಯ್ ಸಿಂಗ್ ಮೊದಲು ಮಾಡಿದ ಕೆಲಸವೆಂದರೆ ತಮ್ಮ ತಂದೆ ಧರ್ಮಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದು. 2004 ರಿಂದ 2006 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಎನ್. ಧರ್ಮಸಿಂಗ್ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಜಯ್ ಸಿಂಗ್, ಈಗ ಮೊದಲ ಬಾರಿಗೆ ಸಚಿವರಾಗಿ ಅಧಿಕಾರಕ್ಕೇರುತ್ತಿದ್ದಾರೆ. ತಂದೆಯ ಕನಸನ್ನು ಮಗ ನುಡಿದಂತೆ ನುಡಿದು ನನಸು ಮಾಡಿದ್ದಾನೆ.

ಜೇವರ್ಗಿ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಜಯ್ ಸಿಂಗ್, ಪ್ರತಿ ಬಾರಿಯೂ ಮಂತ್ರಿ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ನಾನಾ ಕಾರಣಗಳಿಂದ ಕೈತಪ್ಪುತ್ತಿದ್ದ ಅವಕಾಶ ಈ ಬಾರಿ ಒಲಿದುಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಒಡನಾಟ ಹೊಂದಿರುವ ಇವರ ಈ ಬೆಳವಣಿಗೆ ಕಲ್ಯಾಣ ಕರ್ನಾಟಕ ಭಾಗದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಗೆ ಈಗ ಬಲ ಬಂದಂತಾಗಿದೆ. ಈಗಾಗಲೇ ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ್ ಪಾಟೀಲ್ ಸಚಿವರಾಗಿದ್ದು, ಈಗ ಅಜಯ್ ಸಿಂಗ್ ಸೇರ್ಪಡೆಯಿಂದ ಸುಮಾರು ಎರಡು ದಶಕಗಳ ಬಳಿಕ ಜಿಲ್ಲೆಗೆ ಒಟ್ಟು ಮೂರು ಸಚಿವ ಸ್ಥಾನಗಳು ಲಭಿಸಿದಂತಾಗಿದೆ.

ಈ ರಾಜಕೀಯ ಬೆಳವಣಿಗೆ ಕೇವಲ ಒಂದು ಕುಟುಂಬದ ಖುಷಿಯಷ್ಟೇ ಅಲ್ಲ, ಜೇವರ್ಗಿ ಕ್ಷೇತ್ರ ಹಾಗೂ ಇಡೀ ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ನಿರೀಕ್ಷೆಗೆ ಸಿಕ್ಕ ಪ್ರತಿಫಲ. ಅಜಯ್ ಸಿಂಗ್ ಅವರ ಈ ಹೊಸ ಜವಾಬ್ದಾರಿಯು ಜನರ ಆಶೋತ್ಥೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ

- Advertisement -spot_img

More articles

- Advertisement -spot_img

Latest article