No menu items!
19.6 C
Munich
Friday, May 1, 2026

‘ವಸುದೇವ ಕುಟುಂಬ’ದಲ್ಲಿ ಕಿರಿಕ್ ; ನಡು ರಸ್ತೆಯಲ್ಲಿ ನಿರ್ಮಾಪಕ, ಬಿಗ್ ಬಾಸ್ ಹಂಸಾ ರಂಪ-ದೂರು ದಾಖಲು

Must read

ಬಣ್ಣದ ಲೋಕ ಅಂದರೆ ತಳುಕು-ಬಳುಕು ಮಾತ್ರ ಅಲ್ಲ. ಇಲ್ಲಿ ಕೇವಲ ಲೈಟ್, ಕ್ಯಾಮರಾ, ಆಕ್ಷನ್ ಮಾತ್ರ ಕೇಳಿಸುವುದಿಲ್ಲ. ಬೇರೆ ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಕೂಡ ಕಣ್ಣೀರ ಕೋಡಿ ಹರಿಯುತ್ತಿರುತ್ತೆ. ನೋವಿನ ಕಥೆಗಳು ಹೊರ ಬರುತ್ತಿರುತ್ತವೆ. ಇದಕ್ಕೆ ವಸುದೇವ ಕುಟುಂಬದ ವಿವಾದ ಸದ್ಯದ ಉದಾಹರಣೆ.

ಹೌದು, ಮನೆ ಮಂದಿಯನ್ನೆಲ್ಲಾ ಕೂರಿಸಿ ಮನರಂಜನೆಯ ರಸದೌತಣ ಉಣ ಬಡಿಸುವ ಕಿರುತೆರೆಯ ಆದರ್ಶ ಕುಟುಂಬ ಸದ್ಯ ತಮ್ಮದೇ ಮನೆಯ ಸದಸ್ಯರ ವಿರುದ್ಧ ಸಿಡಿದೆದ್ದಿದ್ದಾರೆ. ಇಂದು (ಮೇ 1) ಕಾರ್ಮಿಕರ ದಿನದಂದೇ ಈ ಕಿರುತೆರೆಯ ಕಾರ್ಮಿಕರು ಅಕ್ಷರಶಃ ಬೀದಿ ರಂಪಾಟ ಮಾಡಿದ್ದಾರೆ. ಸಂಭಾವನೆ ಕೊಡದ ನಿರ್ಮಾಪಕರನ್ನು ನಡುರಸ್ತೆಯಲ್ಲೇ ಅಡ್ಡಹಾಕಿ ಕಲಾವಿದರು ಕ್ಲಾಸ್ ತಗೊಂಡಿರೋದು ಈಗ ಕಿರುತೆರೆಯಲ್ಲಿ ಭಾರಿ ಸದ್ದು ಮಾಡ್ತಿದೆ.

ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ”ವಸುದೇವ ಕುಟುಂಬ” ಧಾರಾವಾಹಿಯ ಚಿತ್ರೀಕರಣದ ವೇಳೆ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸರಿಯಾಗಿ ಊಟ-ತಿಂಡಿ ನೀಡಿಲ್ಲ ಅನ್ನೋದು ಈಗ ಹೊರಬಿದ್ದಿರೋ ಸ್ಫೋಟಕ ಸತ್ಯ. ಬಿಗ್ ಬಾಸ್ ಖ್ಯಾತಿಯ ಹಂಸ, ಚೈತ್ರಾ ಸೇರಿದಂತೆ ಹಲವು ನಟಿಯರು ನಿರ್ಮಾಪಕ ಅನಿಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಳೆದೆರಡು ತಿಂಗಳಿನಿಂದ ಸಂಭಾವನೆ ನೀಡದೆ ಸತಾಯಿಸುತ್ತಿದ್ದ ನಿರ್ಮಾಪಕರನ್ನು ನಾಗರಬಾವಿಯ ಹೋಟೆಲ್ ಬಳಿ ಕಲಾವಿದರು ಘೇರಾವ್ ಹಾಕಿದ್ದಾರೆ. ಆದರೆ, ಉತ್ತರ ಕೊಡಲಾಗದ ನಿರ್ಮಾಪಕ ಅನಿಲ್ ಮತ್ತು ಅವರ ಪತ್ನಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ನಟಿ ಹಂಸ ಅವರಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಸಂಭಾವನೆ ಬಾಕಿ ಇದೆಯಂತೆ. ಇನ್ನು ಚೈತ್ರಾ ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮದುವೆ ಸೀನ್ ಶೂಟಿಂಗ್ ಇದೆ, ಹಣ ಹೊಂದಿಸಬೇಕು ಅಂತ ನಿರ್ಮಾಪಕರು ಮಾಡಿದ್ದ ಮನವಿಗೆ ಬೆಲೆ ಕೊಟ್ಟು ಕಲಾವಿದರು ಇಷ್ಟು ದಿನ ಸುಮ್ಮನಿದ್ದರು. ಆದರೆ ಮಾರ್ಚ್ ಮುಗಿದು ಏಪ್ರಿಲ್ ಹೋದರೂ ಕೈಗೆ ಕಾಸು ಸಿಕ್ಕಿಲ್ಲ. ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಕೇಳಿದ್ರೆ ಸರಿಯಾಗಿ ಉತ್ತರ ಕೊಡಲ್ಲ. ಈ ಉದಾಸೀನದ ಪರಮಾವಧಿಯೇ ಇಂದು ಕಲಾವಿದರನ್ನ ಬೀದಿಗೆ ತಂದು ನಿಲ್ಲಿಸಿದೆ.

ನಿರ್ಮಾಪಕರ ಹೋಟೆಲ್ ಬಳಿ ಹೋಗಿ ಹಣ ಕೇಳಿದ ಹಂಸ ಅವರಿಗೆ ಅಲ್ಲಿ ಸಿಕ್ಕಿದ್ದು ಮಾತ್ರ ಅವಮರ್ಯಾದೆ. ನೀವು ರೌಡಿಸಂ ಮಾಡ್ತಿದ್ದೀರಾ? ಅಂತ ನಿರ್ಮಾಪಕರ ಪತ್ನಿ ಉಲ್ಟಾ ಪ್ರಶ್ನೆ ಮಾಡಿದ್ದಾರಂತೆ. ಇದರಿಂದ ಕೆರಳಿದ ಹಂಸ ಸಾರ್ವಜನಿಕವಾಗಿಯೇ ನಿರ್ಮಾಪಕರ ಧೋರಣೆಯನ್ನು ಖಂಡಿಸಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ಹಂಸ, ಇದೊಂದು ಕಚಡಾ ನಿರ್ಮಾಣ ಸಂಸ್ಥೆ ಅಂತ ಹರಿಹಾಯ್ದಿದ್ದಾರೆ. ಕಲಾವಿದರಿಗೆ ಮರ್ಯಾದೆ ಕೊಡದ ಇಂತಹ ನಿರ್ಮಾಪಕರಿಂದಾಗಿ ಬೇರೆ ಅವಕಾಶಗಳೂ ಕೈತಪ್ಪಿ ಹೋಗಿವೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.ಶೂಟಿಂಗ್ ಸೆಟ್‌ನಲ್ಲಿ ಕಲಾವಿದರ ಸ್ಥಿತಿ ಎಷ್ಟು ಭೀಕರವಾಗಿತ್ತು ಅಂದ್ರೆ, ಅವರಿಗೆ ಸರಿಯಾದ ಊಟದ ವ್ಯವಸ್ಥೆಯೂ ಇರಲಿಲ್ಲವಂತೆ. ನಮಗೆ ಹಳಸಿದ ಅನ್ನ ಹಾಕಿದ್ದಾರೆ ಅಂತ ಹಂಸ ಮತ್ತು ಚೈತ್ರಾ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಔಟ್‌ಡೋರ್ ಶೂಟಿಂಗ್‌ಗೆ ಹೋದಾಗ ಶೌಚಾಲಯದ ವ್ಯವಸ್ಥೆ ಕೂಡ ಇರುತ್ತಿರಲಿಲ್ಲವಂತೆ. ವಯಸ್ಸಾದ ಕಲಾವಿದರು, ನಟಿಯರು ಶೌಚಾಲಯವಿಲ್ಲದೆ ಬಯಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು ಅಂದ್ರೆ ಈ ನಿರ್ಮಾಣ ಸಂಸ್ಥೆಯ ಅಸಲಿ ಮುಖ ಎಂತದ್ದು ಅನ್ನೋದು ನೀವೇ ಯೋಚನೆ ಮಾಡಿ.

ಹಣ ಕೇಳಿದ ಕಲಾವಿದರನ್ನ ಧಾರಾವಾಹಿಯಿಂದಲೇ ತೆಗೆದುಹಾಕುವ ಬೆದರಿಕೆ ಕೂಡ ಇತ್ತಂತೆ. ಯೂನಿಟ್ ಸದಸ್ಯರನ್ನ ಅತ್ಯಂತ ಕ್ಷುಲ್ಲಕವಾಗಿ ಕಾಣಲಾಗುತ್ತಿತ್ತು. ನಮಗೆ ಸಮಾಜದಲ್ಲಿ ಒಂದು ಮರ್ಯಾದೆ ಇದೆ ಅಂತ ಇಷ್ಟು ದಿನ ಸಹಿಸಿಕೊಂಡಿದ್ದೆವು, ಆದರೆ ಈಗ ತಾಳ್ಮೆ ಮೀರಿದೆ ಅಂತ ನಟಿಯರು ಗುಡುಗಿದ್ದಾರೆ. ಕೋರಮಂಗಲ ಟಾಕೀಸ್ ಹೆಸರಲ್ಲಿ ಧಾರಾವಾಹಿ ಮಾಡ್ತಿರೋ ಅನಿಲ್ ಅವರು ಹಣ ನೀಡುವ ಬದಲು ಕಲಾವಿದರ ಮೇಲೆಯೇ ರೌಡಿಸಂ ಆರೋಪ ಹೊರಿಸಿ ಪರಾರಿಯಾಗಿರೋದು ಇಡೀ ಚಿತ್ರರಂಗವೇ ತಲೆತಗ್ಗಿಸುವಂತೆ ಮಾಡಿದೆ.

ಸದ್ಯ ಈ ಕಿರುತೆರೆಯ ಕಿತ್ತಾಟ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಹಂಸ ಮತ್ತು ಚೈತ್ರಾ ಸೇರಿ ಬ್ಯಾಟರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟ ಅವಿನಾಶ್ ಮತ್ತು ಅಂಜಲಿ ಅವರಂತಹ ಹಿರಿಯ ಕಲಾವಿದರು ಇರೋ ಸೀರಿಯಲ್‌ನಲ್ಲಿ ಇಂತಹ ಅವ್ಯವಸ್ಥೆ ಇರೋದು ನಿಜಕ್ಕೂ ವಿಪರ್ಯಾಸ. ಕಾರ್ಮಿಕರ ದಿನದಂದೇ ಕಾರ್ಮಿಕರ (ಕಲಾವಿದರ) ಹೊಟ್ಟೆ ಮೇಲೆ ಹೊಡೆದ ನಿರ್ಮಾಪಕರಿಗೆ ಕಾನೂನು ಪಾಠ ಕಲಿಸಬೇಕು ಅಂತ ಕಲಾವಿದರು ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ, ‘ವಸುದೇವ ಕುಟುಂಬ’ದ ಒಳಗಿನ ಕಲಹ ಈಗ ಅಕ್ಷರಶಃ ರಸ್ತೆ ರಂಪಾಟವಾಗಿದೆ. ನಿರ್ಮಾಪಕರು ಪೇಮೆಂಟ್ ಕೊಡ್ತಾರಾ ಅಥವಾ ಸೀರಿಯಲ್ ಅರ್ಧಕ್ಕೆ ನಿಲ್ಲುತ್ತಾ ಅನ್ನೋದು ಸದ್ಯದ ಪ್ರಶ್ನೆ. ಬಣ್ಣದ ಲೋಕದ ಈ ಕರಾಳ ಮುಖದ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೀತಿದೆ. ಹಸಿದ ಹೊಟ್ಟೆಯಲ್ಲಿ ನಟಿಸಿದ ಕಲಾವಿದರಿಗೆ ನ್ಯಾಯ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ

- Advertisement -spot_img

More articles

- Advertisement -spot_img

Latest article