No menu items!
8.3 C
Munich
Sunday, May 17, 2026

ಮದುವೆ ಆಮಿಷವೊಡ್ಡಿ ಯುವತಿ ಜೊತೆ ದೈಹಿಕ ಸಂಪರ್ಕ, ವಂಚನೆ ; ಚಿತ್ರದುರ್ಗದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್‌

Must read

ರಕ್ಷಿಸಬೇಕಾದ ಕಾನೂನು ಪಾಲಕನೇ ಇಲ್ಲಿ ಭಕ್ಷಕನಾದ ಕಥೆ ಇದು. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಲಿಸಿಕೊಂಡು, ಆಕೆ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತದ ಮಾತ್ರೆ ನೀಡಿ ಕೈಕೊಟ್ಟಿರುವ ಕರಾಳ ಕೃತ್ಯವೊಂದು ಚಿತ್ರದುರ್ಗದ ಪೊಲೀಸ್ ಇಲಾಖೆಯಲ್ಲೇ ಬೆಳಕಿಗೆ ಬಂದಿದೆ. ಚಿತ್ರದುರ್ಗ ಡಿಎಆರ್ (DAR) ವಿಭಾಗದ ರಿಸರ್ವ್ ಸಬ್-ಇನ್ಸ್‌ಪೆಕ್ಟರ್ (RSI) ವರುಣ್ ಕುಮಾರ್ ವಿರುದ್ಧ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದಾಳೆ.

ಈ ವಂಚನೆಯ ಕಥೆ ಶುರುವಾಗಿದ್ದು ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ಚಾಟಿಂಗ್ ಮೂಲಕ! ಮೂಲತಃ ದಾವಣಗೆರೆಯವರಾದ ಸಂತ್ರಸ್ತೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಚಿತ್ರದುರ್ಗದ ಆರ್‌ಎಸ್‌ಐ ವರುಣ್ ಕುಮಾರ್ ಪರಿಚಯವಾಗಿತ್ತು. ಆ ಸಮಯದಲ್ಲಿ ವರುಣ್ ಪೊಲೀಸ್ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದಾಗ ಇವರಿಬ್ಬರ ಪರಿಚಯ ಗಾಢವಾಗಿ, ಮುಂದೆ ಪ್ರೀತಿಗೆ ತಿರುಗಿತ್ತು.

ವರುಣ್ ಕುಮಾರ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಬೆಂಗಳೂರಿನ ಆಕೆಯ ರೂಮ್ ಹಾಗೂ ಚಿತ್ರದುರ್ಗದ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನಿರಂತರವಾಗಿ ದೈಹಿಕ ಸಂಬಂಧ ಬೆಳೆಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಖಾಕಿ ಯೂನಿಫಾರ್ಮ್ ಹಾಕಿದ ಅಧಿಕಾರಿಯನ್ನು ನಂಬಿದ ಯುವತಿಗೆ ತಾನು ಮುಂದೆ ಇಂತಹದೊಂದು ದೊಡ್ಡ ಮೋಸದ ಜಾಲಕ್ಕೆ ಬೀಳ್ತೀನಿ ಅನ್ನೋ ಸಣ್ಣ ಸುಳಿವೂ ಇರಲಿಲ್ಲ.

ಈ ಲೈಂಗಿಕ ಶೋಷಣೆಯ ಪರಿಣಾಮವಾಗಿ ಯುವತಿ ಗರ್ಭಿಣಿಯಾಗಿದ್ದಾಳೆ. ತಾನು ಪ್ರೆಗ್ನೆಂಟ್ ಅನ್ನೋ ವಿಷಯ ತಿಳಿಸಿ, ಇನ್ನಾದರೂ ಮದುವೆ ಮಾಡಿಕೊಳ್ಳಿ ಎಂದು ವರುಣ್ ಬಳಿ ಯುವತಿ ಹಠ ಹಿಡಿದಿದ್ದಾಳೆ. ಆದರೆ, ಮದುವೆ ಮಾಡಿಕೊಳ್ಳುವ ಭರವಸೆ ನೀಡಿ ನಂಬಿಸಿದ್ದ ಆರ್‌ಎಸ್‌ಐ ವರುಣ್, ತಕ್ಷಣವೇ ತನ್ನ ಅಸಲಿ ಬುದ್ಧಿ ತೋರಿಸಿದ್ದಾನೆ. ಆಕೆಗೆ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ನೀಡಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಕಣ್ಣೀರಿಡುತ್ತಾ ಉಲ್ಲೇಖಿಸಿದ್ದಾಳೆ.

ಅಬಾರ್ಷನ್ ಆದ ಮೇಲೆ ಯುವತಿ ಮದುವೆಗಾಗಿ ಮತ್ತಷ್ಟು ಒತ್ತಾಯ ಮಾಡಿದಾಗ ವರುಣ್ ಕುಮಾರ್ ಪಕ್ಕಾ ಕಿಲಾಡಿಯಂತೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ತೀವ್ರವಾಗಿ ನೊಂದ ಯುವತಿ ಸೀದಾ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಮಹಿಳಾ ಠಾಣೆಯ ಪೊಲೀಸರು ವರುಣ್ ಕುಮಾರ್ ವಿರುದ್ಧ ಎಫ್‌ಐಆರ್ (FIR) ದಾಖಲು ಮಾಡಿಕೊಂಡಿದ್ದಾರೆ.

ಅನ್ಯಾಯಕ್ಕೊಳಗಾದ ಯುವತಿ ಇಷ್ಟಕ್ಕೇ ಸುಮ್ಮನಾಗಿಲ್ಲ. ಸೀದಾ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಅವರನ್ನು ಭೇಟಿಯಾಗಿ ತನಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದಾಳೆ. ನನಗೆ ನ್ಯಾಯ ಸಿಗಬೇಕು, ನನ್ನನ್ನು ವಂಚಿಸಿದ ಆ ಪೊಲೀಸ್ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು ಎಂದು ಎಸ್‌ಪಿ ಮುಂದೆ ಆಕೆ ಪಟ್ಟು ಹಿಡಿದಿದ್ದಾಳೆ. ವಿಷಯ ಗಂಭೀರವಾಗುತ್ತಿದ್ದಂತೆ ಇತ್ತ ಆರೋಪಿ ಆರ್‌ಎಸ್‌ಐ ವರುಣ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ವಂಚನೆ, ಅತ್ಯಾಚಾರದ ಆಮಿಷ ಹಾಗೂ ಸಮ್ಮತಿಯಿಲ್ಲದೆ ಬಲವಂತವಾಗಿ ಗರ್ಭಪಾತ ಮಾಡಿಸಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಪೊಲೀಸ್ ಇಲಾಖೆಯ ನಿಯಮಗಳ ಪ್ರಕಾರ, ಯಾವುದೇ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ತಲೆಮರೆಸಿಕೊಂಡರೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗುತ್ತದೆ. ತನಿಖೆ ಮುಗಿದ ಮೇಲೆ ಇಲಾಖೆಯಿಂದಲೇ ವಜಾ ಮಾಡುವ ಅವಕಾಶವೂ ಇರುತ್ತದೆ.

ಒಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಸಿಗುವ ಪ್ರೀತಿಯ ಈ ನಕಲಿ ಭರವಸೆಗಳನ್ನು ನಂಬಿ ಜನ ಸಾಮಾನ್ಯರು ಮಾತ್ರವಲ್ಲ, ವಿದ್ಯಾವಂತ ಯುವತಿಯರು ಕೂಡ ಹೇಗೆ ವಂಚನೆಗೆ ಒಳಗಾಗುತ್ತಿದ್ದಾರೆ ಎಂಬುದಕ್ಕೆ ಈ ಖಾಕಿ ವಂಚನೆ ಪ್ರಕರಣವೇ ಸಾಕ್ಷಿ.

- Advertisement -spot_img

More articles

- Advertisement -spot_img

Latest article